ಬೆಂಗಳೂರಿನ ಸಂಜಯ್ ನಗರದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಪಶ್ಚಿಮ ಬಂಗಾಳದ 26 ವರ್ಷದ ಯುವತಿಯೊಬ್ಬರು ಮಾಲೀಕನ ಸಹೋದರ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ತನ್ನನ್ನು ಅವಾಚ್ಯವಾಗಿ ನಿಂದಿಸಿ, ಕಪಾಳಮೋಕ್ಷ ಮಾಡಿ, ಉಸಿರುಗಟ್ಟಿಸಿ, ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಯುವತಿ ಹೇಳಿದ್ದಾರೆ.
ಡಿಸೆಂಬರ್ 3 ರಂದು ತನ್ನ ಅಪಾರ್ಟ್‌ಮೆಂಟ್ ಗೇಟ್‌ಗೆ ಪಾರ್ಸೆಲ್ ತೆಗೆದುಕೊಳ್ಳಲು ಹೋದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದು, ಆಕೆ ದೂರು ನೀಡಿದ ನಂತರ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿ ವಿರುದ್ದ ಕ್ರಮ ಕೈಗೊಂಡಿದ್ದಾರೆ.
ಹಿಂಸಾತ್ಮಕ ಘಟನೆ ನಡೆಯುವ ಮೊದಲು ತಮ್ಮ ಮನೆ ಮಾಲೀಕನ ಸಹೋದರ ಹಲವಾರು ತಿಂಗಳುಗಳಿಂದ ಕಿರುಕುಳ ನೀಡುತ್ತಿದ್ದ ಎಂದು ಯುವತಿ ಹೇಳಿಕೊಂಡಿದ್ದಾರೆ.
ಡಿಸೆಂಬರ್ 3 ರ ಬೆಳಿಗ್ಗೆ, ಕಿಟಕಿಯ ಬಳಿ ಬಂದ ಅವರು, ಬಾಗಿಲು ತೆರೆಯಿರಿ ನಿಮ್ಮೊಂದಿಗೆ ಮಾತನಾಡಬೇಕಿದೆ ಎಂದಾಗ ನಾನು ನಯವಾಗಿ ನಿರಾಕರಿಸಿದೆ. ಇದರಿಂದ ಅವರು ನನ್ನ ಮೇಲೆ ಅಸಮಾಧಾನಗೊಂಡಿದ್ದರು ಎಂದು ಯುವತಿ ಎಕ್ಸ್ ನಲ್ಲಿ ಹಾಕಿರುವ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ .
ಬಳಿಕ ಆ ರಾತ್ರಿ, ನಾನು ಡೆಲಿವರಿ ಮಾಡುವ ವ್ಯಕ್ತಿಗೆ ಪಾರ್ಸೆಲ್ ಹಸ್ತಾಂತರಿಸಲು ನಾನು ಕೆಳಕ್ಕೆ ಹೋದೆ. ಮದ್ಯ ಸೇವಿಸಿದ್ದ ಆ ವ್ಯಕ್ತಿ ಎದುರಾಗಿದ್ದು, ನನ್ನೊಂದಿಗೆ ಏಕೆ ಮಾತನಾಡಲಿಲ್ಲವೆಂದು ಪ್ರಶ್ನಿಸಿದರು. ನಾನು ಆತನನ್ನು ನಿರ್ಲಕ್ಷಿಸಿದಾಗ ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.