ಬೆಂಗಳೂರು: 2024ರ ಜನವರಿ 1ರಿಂದ ವೇತನ ಪರಿಷ್ಕರಣೆ, ನೌಕರರು ಮತ್ತು ನಿವೃತ್ತ ನೌಕರರಿಗೆ ಹಿಂಬಾಕಿ ಮೊತ್ತ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇಂದು ಬೆಳಗಾವಿ ಚಲೋ ಹಮ್ಮಿಕೊಂಡಿದೆ.
ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ನಡೆದ ಮಾತುಕತೆ ಫಲಪ್ರದವಾಗದೆ ಇರುವುದರಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆ.ಎಸ್.ಆರ್.ಟಿ.ಸಿ. ನೌಕರರು ಬೆಳಗಾವಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ವೇತನ ಹೆಚ್ಚಳದ 38 ತಿಂಗಳ ಬಾಕಿ ನೀಡಬೇಕು. 2024ರ ಜನವರಿ 1ರಿಂದ ವೇತನ ಹೆಚ್ಚಳ ಬಗ್ಗೆ ಕ್ರಮ ಕೈಗೊಂಡಿಲ್ಲ. ನಿವೃತ್ತ ನೌಕರರ ಹಿಂಬಾಕಿ ನೀಡಲು ಮಾತ್ರ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಚಲೋ ನಡೆಸಲಾಗುವುದು ಎಂದು ಹೇಳಲಾಗಿದೆ.
ಡಿಸೆಂಬರ್ 9 ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮುಷ್ಕರದ ನೋಟಿಸ್ ನೀಡಲಾಗುವುದು. 15 ದಿನಗಳಲ್ಲಿ ಬೇಡಿಕೆ ಈಡೇರಿಸಲು ಸ್ಪಂದಿಸಿದಿದ್ದರೆ ಡಿಸೆಂಬರ್ 31ರಿಂದ ಮುಷ್ಕರ ನಡೆಸಲಾಗುವುದು ಎಂದು ಹೇಳಲಾಗಿದೆ.