ಪಾಟ್ನಾ: ಬಿಹಾರದ ಬಕ್ಸರ್ ಜಿಲ್ಲೆಯ ರಾಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರೆಂಜಾ ಗ್ರಾಮದಲ್ಲಿ ಭಾನುವಾರ ನಡೆದ ದುರಂತ ಘಟನೆಯಲ್ಲಿ ಮಣ್ಣಿನ ಗುಡ್ಡ ಕುಸಿದು ನಾಲ್ಕು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ.
ಮನೆಗಳಿಗೆ ಮಣ್ಣಿನ ಒಲೆ ಮಾಡಲು ಮಣ್ಣು ಅಗೆಯುತ್ತಿದ್ದ ಹೆಣ್ಣು ಮಕ್ಕಳು ಮಣ್ಣಿನ ರಾಶಿಯಡಿ ಹೂತು ಹೋಗಿದ್ದಾರೆ. ಮತ್ತೊಬ್ಬ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಶಿವನಿ ಕುಮಾರಿ(6), ಸಂಜು ಕುಮಾರಿ(11), ನಯನತಾರಾ ಕುಮಾರಿ(12), ಮತ್ತು ಸರಿತಾ ಕುಮಾರಿ(11) ಮೃತಪಟ್ಟವರು. ಐವರು ಬಾಲಕಿಯರು ಪಿಡಿಯಾ ಹಬ್ಬದ ಹಿನ್ನಲೆ ತಮ್ಮ ಮನೆಗಳಿಗೆ ಪ್ಲಾಸ್ಟರ್ ಮಾಡಲು ಮಣ್ಣು ಸಂಗ್ರಹಿಸಲು ತೆರಳಿದ್ದರು.
ಹಲವು ವರ್ಷಗಳಿಂದ ಮಣ್ಣಿನ ಗುಡ್ಡವನ್ನು ಅಗೆದ ಕಾರಣ ಸಡಿಲವಾಗಿದೆ. ಬಾಲಕಿಯರು ಅದೇ ಸ್ಥಳದಲ್ಲಿ ಅಗೆಯುವಾಗ ದಿಬ್ಬವು ಇದ್ದಕ್ಕಿದ್ದಂತೆ ಕುಸಿದು ಹುಡುಗಿಯರು ಕೆಳಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಪಕ್ಕದಲ್ಲಿ ಆಟವಾಡುತ್ತಿದ್ದ ಮಕ್ಕಳು ಕೂಗಾಡಿದ್ದು, ನಿವಾಸಿಗಳು ಸಂತ್ರಸ್ತರನ್ನು ರಕ್ಷಿಸಲು ಮುಂದಾದರು. ಅವಶೇಷಗಳನ್ನು ತೆಗೆದುಹಾಕಲು ಮತ್ತು ಬಾಲಕಿಯರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಐದನೇ ಬಾಲಕಿ ಕರಿಷ್ಮಾ ಕುಮಾರಿ(10) ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಸದರ್ ಎಸ್‌ಡಿಪಿಒ ಧೀರಜ್ ಕುಮಾರ್ ನೇತೃತ್ವದ ತಂಡವು ಕುಸಿತದ ಕಾರಣಗಳನ್ನು ಪರಿಶೀಲಿಸುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶುಭಂ ಆರ್ಯ ಖಚಿತಪಡಿಸಿದ್ದಾರೆ. ಮಣ್ಣಿನ ದಿಬ್ಬವು ಗ್ರಾಮಸ್ಥರಿಗೆ ದೀರ್ಘಕಾಲದಿಂದ ಮಣ್ಣಿನ ಮೂಲವಾಗಿತ್ತು, ಇದನ್ನು ಹೆಚ್ಚಾಗಿ ಮಣ್ಣಿನ ಮನೆಗಳು ಮತ್ತು ಒಲೆಗಳಂತಹ ನಿರ್ಮಾಣ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಬಿಹಾರ ಸರ್ಕಾರವು ಪ್ರತಿ ಮೃತ ಬಾಲಕಿಯ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.