ಬೆಳಗಾವಿ: ಅಪರಾಧಕೃತ್ಯಗಳು ಕಡಿಮೆಯಾಗಲೆಂದು ದೇವರ ಮೊರೆ ಹೋದ ಪೊಲೀಸರು ಪೊಲೀಸ್ ಠಾಣೆಯಲ್ಲಿಯೇ ಹೋಮ, ವಿಶೇಷ ಪೂಜೆಗಳನ್ನು ನೆರವೇರಿಸಿದ ವಿಚಿತ್ರ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಮಳಮಾರುತಿ ಠಾಣೆಯಲ್ಲಿ ಪೊಲೀಸರು ಪೊಲೀಸ್ ಸ್ಟೇಷನ್ ಹಾಲ್ ನಲ್ಲಿ ರಣಚಂಡಿಕಾ ಹೋಮ ನೆರವೇರಿಸಿದ್ದಾರೆ. ಅಪರಾಧ ಚಟುವಟಿಕೆಗಳು ಕಡಿಮೆಯಾಗಲಿ, ಠಾಣೆಯಲ್ಲಿ ಶಾಂತಿ ನೆಲಸಲಿ ಎಂಬ ಕಾರಣಕ್ಕೆ ರಣಚಂಡಿಕಾ ಹೋಮ ನೆರವೇರಿಸಲಾಗಿದೆ.
ಕಳೆದ ಒಂದುವರೆ ತಿಂಗಳಲ್ಲಿ ಮಳಮಾರುತಿ ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಕೊಲೆ, ಸುಲಿಗೆ ದರೋಡೆ, ಕೊಲೆಯತ್ನ, ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ, ಯುವಕನ ಮೇಲೆ ಗುಂಡಿನ ದಾಳಿ ಹೀಗೆ 45ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಪರಾಧ ನಿಯಂತ್ರಣಕ್ಕೆ ಪೊಲೀಸರು ಸಾಕಷ್ಟು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನಗಳಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾಳಮಾರುತಿ ಠಾಣಾಧಿಕಾರಿ ಜೆ.ಎಂ.ಖಾಲಿಮಿರ್ಚಿ, ದೇವರ ಮೊರೆ ಹೋಗಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಹೋಮ ಮಾಡಿಸಿ, ವಿಶೇಷ ಪೂಜೆ ನೆರವೇರಿಸಲಾಗಿದ್ದು, ಠಣೆಯ ಬಾಗಿಲಿಗೆ ಅರಿಶಿನ ಕುಂಕುಮ ಹಚ್ಚಿ, ಬೂದಗುಂಬಳಕಾಯಿ ಒಡೆದು ಪೂಜೆ ನೆರವೇರಿಸಲಾಗಿದೆ. ಇದು ಪೊಲೀಸರೇ ಪೊಲೀಸ್ ಠಾಣೆಯಲ್ಲಿ ಹೋಮ-ವಿಶೇಷ ಪೂಜೆ ನೆರವೇರಿಸಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ. ಮೂಢನಂಬಿಕೆಗೆ ಪೊಲೀಸರೇ ಶರಣಾಗಿದ್ದಾರಾ ಎಂಬ ಚರ್ಚೆ ಆರಂಭವಾಗಿದೆ.