ನವದೆಹಲಿ: ಹೌರಾ ನಿಲ್ದಾಣದಲ್ಲಿ ಸಂಪರ್ಕಿಸುವ ರೈಲನ್ನು ತಡೆದು ಮದುವೆಯ ಅತಿಥಿಗಳನ್ನು ಬ್ಯಾಟರಿ ಚಾಲಿತ ವಾಹನಗಳಲ್ಲಿ ಮತ್ತೊಂದು ರೈಲಿಗೆ ಸ್ಥಳಾಂತರಿಸಿದ ರೈಲ್ವೆಯ ಸಹಾಯದಿಂದ ಮುಂಬೈ ವ್ಯಕ್ತಿಯೊಬ್ಬರು ಭಾನುವಾರ ತನ್ನ ಮನದನ್ನೆಯನ್ನು ಮದುವೆಯಾಗಲು ಸಮಯಕ್ಕೆ ಸರಿಯಾಗಿ ಗುವಾಹಟಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈನಿಂದ ಹೌರಾ ತಲುಪಲು ತಡವಾಗಿದ್ದರಿಂದ ವರ ಮತ್ತು ಅವರ ಸಂಬಂಧಿಕರು ಆತಂಕಕ್ಕೊಳಗಾಗಿದ್ದರು. ಅಲ್ಲಿಂದ ಗುವಾಹಟಿಗೆ ಕರೆದೊಯ್ಯುವ ಸರೈಘಾಟ್ ಎಕ್ಸ್ ಪ್ರೆಸ್ ತಮಗೆ ಸಿಗುವುದು ಕಷ್ಟವಾಗಬಹುದೆಂದು ಹೆದರಿದ್ದರು.
ಇದರ ಮಧ್ಯೆ ಮದುವೆ ತಂಡದಲ್ಲಿದ್ದ ವರನ ಸಂಬಂಧಿಕರೊಬ್ಬರು, ರೈಲ್ವೆಯ ಎಕ್ಸ್ ಹ್ಯಾಂಡಲ್ ನಲ್ಲಿ ಪರಿಸ್ಥಿತಿ ವಿವರಿಸಿ ಸಹಾಯ ಕೋರಿ ಸಂದೇಶವನ್ನು ಪೋಸ್ಟ್ ಮಾಡಿದ್ದರು.
ಇದಕ್ಕೆ ರೈಲ್ವೇ ಅಧಿಕಾರಿಗಳ ಸೂಕ್ತವಾಗಿ ಸ್ಪಂದಿಸಿದ ಪರಿಣಾಮ ಅಂತಿಮವಾಗಿ, ವಧು ಮತ್ತು ವರ ಯಾವುದೇ ತೊಂದರೆಯಿಲ್ಲದೆ ನಿಗದಿತ ಮುಹೂರ್ತದಲ್ಲಿ ವಿವಾಹವಾದರು.
ಗೀತಾಂಜಲಿ ಎಕ್ಸ್ಪ್ರೆಸ್ ಶುಕ್ರವಾರ ಮಧ್ಯಾಹ್ನ 1.05 ಕ್ಕೆ ಹೌರಾಗೆ ಬರಬೇಕಿತ್ತು, ಆದರೆ ಅದು ವಿಳಂಬವಾಗಿತ್ತು. ಸರೈಘಾಟ್ ಎಕ್ಸ್ಪ್ರೆಸ್ ಹೌರಾ ನಿಲ್ದಾಣದಿಂದ ಸಂಜೆ 4:05 ಕ್ಕೆ ಅಸ್ಸಾಂಗೆ ಹೊರಡಬೇಕಿತ್ತು. ವರನ ಸಂಬಂಧಿಕರ ಪೋಸ್ಟ್ ನೋಡಿದ ನಂತರ, ಹೌರಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಉನ್ನತ ಅಧಿಕಾರಿಗಳಿಂದ ತುರ್ತು ಸಂದೇಶ ಬಂದಿದ್ದು, ಸರೈಘಾಟ್ ಎಕ್ಸ್ಪ್ರೆಸ್ ನಿರ್ಗಮನವನ್ನು ವಿಳಂಬಗೊಳಿಸಲು ಅಧಿಕಾರಿಗಳು ನಿರ್ಧರಿಸಿದರು.
ಜೊತೆಗೆ ಹೌರಾಗೆ ಗೀತಾಂಜಲಿ ಎಕ್ಸ್ಪ್ರೆಸ್ ತ್ವರಿತವಾಗಿ ಬರುವುದನ್ನು ಖಚಿತಪಡಿಸಿದರು. ಗೀತಾಂಜಲಿ ಎಕ್ಸ್ಪ್ರೆಸ್ ಸಂಜೆ 4.08 ಕ್ಕೆ ಹೌರಾಗೆ ಆಗಮಿಸುತ್ತಿದ್ದಂತೆ, ರೈಲ್ವೆ ಅಧಿಕಾರಿಗಳು ಬ್ಯಾಟರಿ ಚಾಲಿತ ವಾಹನಗಳಲ್ಲಿ ವರ ಮತ್ತವನ ಕುಟುಂಬ ಸದಸ್ಯರನ್ನು ಹೊಸ ಸಂಕೀರ್ಣದ ಪ್ಲಾಟ್ಫಾರ್ಮ್ ಸಂಖ್ಯೆ 24 ರಿಂದ ಸರೈಘಾಟ್ ಎಕ್ಸ್ಪ್ರೆಸ್ ಕಾಯುತ್ತಿದ್ದ ಹಳೆಯ ಸಂಕೀರ್ಣದ ಪ್ಲಾಟ್ಫಾರ್ಮ್ ಸಂಖ್ಯೆ 9 ರವರೆಗೆ ಕಳುಹಿಸಿಕೊಟ್ಟರು.
“ನಾವು ಎರಡು ರೈಲುಗಳ ಎಲ್ಲಾ ಪ್ರಯಾಣಿಕರ ಸಹಾಯ ಮತ್ತು ಬೆಂಬಲವನ್ನು ಪಡೆದಿದ್ದೆವು ಮತ್ತು ರೈಲ್ವೆ ಸಚಿವರು, ಮುಖ್ಯ ವಾಣಿಜ್ಯ ವ್ಯವಸ್ಥಾಪಕರು, ಡಿಆರ್ಎಂ ಮತ್ತು ಇತರ ಹಿರಿಯ ರೈಲ್ವೆ ಅಧಿಕಾರಿಗಳು ವರ ತನ್ನ ಮದುವೆಯನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಎಲ್ಲಾ ಕ್ರಮಗಳನ್ನು ಕೈಗೊಂಡರು” ಎಂದು ಇಆರ್ ಅಧಿಕಾರಿ ಹೇಳಿದ್ದಾರೆ.
ಮರಾಠಿ ಮತ್ತು ಅಸ್ಸಾಮಿ ಆಚರಣೆಗಳಲ್ಲಿ ಭಾನುವಾರ ನಡೆದ ಮದುವೆಗಾಗಿ ವರ ಸಕಾಲಕ್ಕೆ ಗುವಾಹಟಿ ತಲುಪಿದ್ದಾರೆ. ಹೀಗಾಗಿ ನಿಗದಿತ ಮುಹೂರ್ತದಲ್ಲಿ ಮದುವೆ ಸಾಂಗವಾಗಿ ನೆರವೇರಿದ್ದು, ರೈಲ್ವೇ ಅಧಿಕಾರಿಗಳ ಸಹಕಾರಕ್ಕೆ ವರ, ವಧು ಸೇರಿದಂತೆ ಉಭಯ ಕುಟುಂಬಗಳ ಸದಸ್ಯರು ಕೃತಜ್ಷತೆ ಸಲ್ಲಿಸಿದ್ದಾರೆ.