ಬೆಂಗಳೂರು: ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾರಾಷ್ಟ್ರದ ಮತದಾರರಿಗೆ ನವೆಂಬರ್ 20ರಂದು ನಡೆಯುವ ಮಹಾರಾಷ್ಟ್ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ಒಂದು ದಿನ ವೇತನ ಸಹಿತ ರಜೆ ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ.
ಗಡಿ ಜಿಲ್ಲೆಗಳಾದ ಬೀದರ್, ವಿಜಯಪುರ, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಮಹಾರಾಷ್ಟ್ರ ಮತದಾರರು ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಿಸಿದ ಸರ್ಕಾರಿ ಕಚೇರಿಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಶಾಲಾ, ಕಾಲೇಜುಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಜೀವ ವಿಮಾ ನಿಗಮ, ಹಣಕಾಸು ಸಂಸ್ಥೆಗಳು ಹಾಗೂ ಇನ್ನಿತರ ಔದ್ಯಮಿಕ ಸಂಸ್ಥೆಗಳಲ್ಲಿ ಕಾಯಂ, ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಮಹಾರಾಷ್ಟ್ರದ ಅರ್ಹ ಮತದಾರರಿಗೆ ಅಧಿಕಾರಯುತ ಅಧಿಕಾರಿಗಳು ನವೆಂಬರ್ 20ರಂದು ಒಂದು ದಿನ ವೇತನ ಸಹಿತ ರಜೆ ಮಂಜೂರು ಮಾಡುವಂತೆ ಅಧಿಸೂಚನೆ ಹೊರಡಿಸಲಾಗಿದೆ.