ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಛತ್ತೀಸ್ ಗಢದ ವಕೀಲರೊಬ್ಬರನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 50 ಲಕ್ಷ ರೂ.ಗಳ ಹಣಕ್ಕೆ ಬೇಡಿಕೆ ಇಟ್ಟಿದ್ದ ಫೈಜಾನ್ ಖಾನ್ ಅವರನ್ನು ರಾಯ್ಪುರ ನಿವಾಸದಿಂದ ಬಂಧಿಸಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಖಾನ್ಗೆ ಸರಣಿ ಬೆದರಿಕೆಗಳು ಬಂದ ನಂತರ ಶಾರೂಖ್ ಖಾನ್ ಗೆ ಬೆದರಿಕೆ ಹಾಕಲಾಗಿದೆ.ಕಳೆದ ವಾರ ಬಾಂದ್ರಾ ಪೊಲೀಸ್ ಠಾಣೆಗೆ ಬೆದರಿಕೆ ಸಂದೇಶ ಬಂದಿದ್ದು, ನಂತರ ಸುಲಿಗೆ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಸಮಯದಲ್ಲಿ, ಫೈಜಾನ್ ಖಾನ್ ಹೆಸರಿನಲ್ಲಿ ನೋಂದಾಯಿಸಲಾದ ಫೋನ್ ಸಂಖ್ಯೆಯಿಂದ ನಟನಿಗೆ ಬೆದರಿಕೆ ಕರೆ ಮಾಡಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಮುಂಬೈ ಪೊಲೀಸ್ ತಂಡವು ರಾಯ್ಪುರಕ್ಕೆ ಭೇಟಿ ನೀಡಿ ಫೈಜಾನ್ ಅವರನ್ನು ವಿಚಾರಣೆಗೆ ಕರೆಸಿತು. ಆದರೆ, ನವೆಂಬರ್ 2ರಂದು ಫೋನ್ ಕಳೆದುಕೊಂಡಿದ್ದು, ದೂರು ದಾಖಲಿಸಿರುವುದಾಗಿ ಫೈಜಾನ್ ಪೊಲೀಸರಿಗೆ ತಿಳಿಸಿದ್ದಾನೆ. ಸುದ್ದಿಗಾರರೊಂದಿಗೆ ಮಾತನಾಡಿದ ಫೈಜಾನ್, ತನ್ನ ಸಂಖ್ಯೆಯಿಂದ ಮಾಡಿದ ಬೆದರಿಕೆ ಕರೆ ತನ್ನ ವಿರುದ್ಧದ ಪಿತೂರಿಯಾಗಿದೆ ಎಂದು ಹೇಳಿದರು.
ಎರಡು ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉಂಟುಮಾಡಿದ್ದಕ್ಕಾಗಿ ಶಾರುಖ್ ಖಾನ್ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಮತ್ತು ಅದಕ್ಕಾಗಿ ತನ್ನನ್ನು ಸಿಲುಕಿಸಲಾಗಿದೆ ಎಂದು ಫೈಜಾನ್ ಹೇಳಿದ್ದಾರೆ.