ಸಂಡೂರು: ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರದ ಕೃಷ್ಣಾನಗರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ನಿವಾಸಿ ಗಂಗವ್ವ ಬಿರಾದಾರ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ 12 ತಿಂಗಳ ₹24,000 ಹಣ ಕೂಡಿಟ್ಟು ಹೊಲಿಗೆ ಯಂತ್ರ ಖರೀದಿಸಿ, ತನ್ನ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಬದುಕಿನ ಹಾದಿ ರೂಪಿಸಿಕೊಟ್ಟು ತಾಯ್ತನವನ್ನು ಮೆರೆದಿದ್ದಾರೆ. ಬಡತನದಲ್ಲೂ ಸ್ವಾವಲಂಬಿ ಬದುಕಿನ ಕನಸು ಕಾಣುತ್ತಿರುವ ಹೆಣ್ಣುಮಕ್ಕಳಿಗೆ ನೆರವಾಗುವುದೇ ನಮ್ಮ ಯೋಜನೆಯ ಉದ್ದೇಶವೂ ಆಗಿದೆ. ಈ ತಾಯಿಯ ಸಂಕಲ್ಪಕ್ಕೆ ನನ್ನ ಪ್ರಣಾಮ ಎಂದು ಹೇಳಿದ್ದಾರೆ.
ಇದು ನನ್ನ ರಾಜಕೀಯ ಬದುಕಿನ ಮತ್ತೊಂದು ಸಾರ್ಥಕ ಕ್ಷಣ. ನಮ್ಮ ಗ್ಯಾರಂಟಿಗಳ ಬಗ್ಗೆ ದೇಶದ ಪ್ರಧಾನಿಯೇ ಅಪಪ್ರಚಾರಕ್ಕೆ ಇಳಿದಿರುವ, ಇಡೀ ಬಿಜೆಪಿ ಪಕ್ಷ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲೆಂದು ದಿನವಿಡೀ ಜಪಿಸುತ್ತಿರುವ ಹೊತ್ತಿನಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿರುವುದು ಗ್ಯಾರಂಟಿ ವಿರೋಧಿಗಳೆಲ್ಲರಿಗೂ ತಪರಾಕಿ ಬಾರಿಸಿದಂತಿದೆ ಎಂದು ಹೇಳಿದ್ದಾರೆ.
ಬಿಜೆಪಿ – ಜೆಡಿಎಸ್ ನಾಯಕರ ಸುಳ್ಳು, ಅಪಪ್ರಚಾರಗಳ ನಡುವೆ ನಮ್ಮ ಗ್ಯಾರಂಟಿ ಯೋಜನೆ ಗೆಲ್ಲುತ್ತಿದೆ, ಜನರ ಬದುಕು ಬದಲಿಸುತ್ತಿದೆ. ಟೀಕೆಗಳು ಸಾಯುತ್ತಿವೆ, ಕೆಲಸಗಳು ಕಾಣುತ್ತಿವೆ. ಇನ್ನಾದರೂ ಗ್ಯಾರಂಟಿ ವಿರೋಧಿಗಳ ಕಣ್ಣು ತೆರೆಯಲಿ ಎಂದು ಹೇಳಿದ್ದಾರೆ.
ಈಗ ಉಪಚುನಾವಣೆ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಭೇರಿ ಬಾರಿಸುತ್ತಾರೆ. ನಾನು ಮೂರೂ ಕ್ಷೇತ್ರಗಳಲ್ಲಿ ಓಡಾಡಿ ಬಂದಿದ್ದೇನೆ. ನನಗೆ ಆತ್ಮವಿಶ್ವಾಸ ಇದೆ. ಮೂರೂ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.