HomeKarnatakaಬಫರ್ ಜೋನ್ ನಲ್ಲಿ ನೀರು ಶುದ್ಧೀಕರಣ ಘಟಕ: ಭದ್ರಾ ಜಲಾಶಯಕ್ಕೆ ಆತಂಕ

ಬಫರ್ ಜೋನ್ ನಲ್ಲಿ ನೀರು ಶುದ್ಧೀಕರಣ ಘಟಕ: ಭದ್ರಾ ಜಲಾಶಯಕ್ಕೆ ಆತಂಕ

ಶಿವಮೊಗ್ಗ: ಭದ್ರಾ ಜಲಾಶಯವನ್ನೇ ಬುಡಮೇಲು ಮಾಡುವ ಕಾಮಗಾರಿಯೊಂದು ಭದ್ರಾ ಜಲಾಶಯದ ಬುಡದಲ್ಲಿಯೇ ನಡೆಯುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದನ್ನು ತಡೆಯದಿದ್ದರೆ ಜಲಾಶಯಕ್ಕೆ ಅಪಾಯ ಖಂಡಿತ ಎಂದು ರೈತ ನಾಯಕ ಕೆ.ಟಿ. ಗಂಗಾಧರ್ ಆತಂಕ ವ್ಯಕ್ತಪಡಿಸಿದರಲ್ಲದೆ ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಅವರು ಇದು ಪ್ರಕೃತಿ ಮೇಲಾಗುವ ದಬ್ಬಾಳಿಕೆ ಮತ್ತು ವಿಕೃತಿ ಎಂದರು.

ಭದ್ರಾ ಜಲಾಶಯ ಮಧ್ಯ ಕರ್ನಾಟಕದಲ್ಲಿಯೇ ಬಹುದೊಡ್ಡ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯಾಗಿದೆ. ಸುಮಾರು 6 ಜಿಲ್ಲೆಗಳ 4.50 ಲಕ್ಷ ಎಕರೆ ಜಮೀನಿಗೆ ನೀರನ್ನು ಒದಗಿಸುತ್ತದೆ. ಕುಡಿಯುವ ನೀರಿಗಾಗಿ 7.5 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ತರೀಕೆರೆ, ಹೊಸದುರ್ಗ ಸೇರಿದಂತೆ ಹಲವು ತಾಲೂಕುಗಳ ಗ್ರಾಮಗಳಿಗೆ ನೀರನ್ನು ನೀಡಲಾಗುತ್ತದೆ. ಈಗ ಕುಡಿಯುವ ನೀರಿನ ಯೋಜನೆಗಾಗಿ ಶುದ್ದ ನೀರಿನ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ ಭದ್ರಾ ಜಲಾಶಯದ ಬುಡ ಭಾಗದಲ್ಲಿ ಕಾಮಗಾರಿ ಆರಂಭವಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಯೋಜನೆ ತಪ್ಪಲ್ಲ. ಆದರೆ, ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಈ ಯೋಜನೆಗಾಗಿ ಶುದ್ದ ನೀರಿನ ಘಟಕವನ್ನು ಜಲಾಶಯದ ತಳ ಭಾಗದಲ್ಲಿಯೇ ಪ್ರಾರಂಭಿಸಲು ಹೊರಟಿರುವುದು ಆತಂಕಕ್ಕೆ ಕಾರಣವಾಗಿದೆ. ಸುಮಾರು 500 ಕೋಟಿ ರೂ. ವೆಚ್ಚದ ಈ ಘಟಕಕ್ಕೆ 16 ಎಕರೆ ಪ್ರದೇಶವನ್ನು ಆಂದ್ರ ಮೂಲದ ಗುತ್ತಿಗೆದಾರನೊಬ್ಬನಿಗೆ ನೀಡಲಾಗಿದೆ. ಜಲಾಶಯವು ಈಗಾಗಲೇ ಅತ್ಯಂತ ಸೂಕ್ಷ್ಮ, ಸುರಕ್ಷಿತ ಪ್ರದೇಶವಾಗಿದೆ. ಇಲ್ಲಿ ಯಾವುದೇ ಯೋಜನೆಗಳಾಗಲಿ, ವಸತಿ ಗೃಹಗಳಾಗಲಿ, ಸರ್ಕಾರದ ಕಟ್ಟಡಗಳಾಗಲಿ ನಿರ‍್ಮಾಣ ಮಾಡುವ ಆಗಿಲ್ಲ. ಇದು ಭದ್ರತೆಯ ಪ್ರದೇಶವಾಗಿದೆ. ಹೀಗಿದ್ದರೂ ಕೂಡ ಜಲಾಶಯದಿಂದ ಕೇವಲ 500ಮೀ ಒಳಗೆಯೇ ತಳಭಾಗದಲ್ಲಿ ಈ ಘಟಕ ಸ್ಥಾಪನೆಯಾಗುತ್ತಿರುವುದು ತೀರ ಅವೈಜ್ಞಾನಿಕ ಮತ್ತು ನೀಚತನದ ಪರಮಾವಧಿಯಾಗಿದೆ ಎಂದರು.

ಸುಮಾರು 500 ಕೋಟಿ ರೂ. ವೆಚ್ಚದ ಈ ಯೋಜನೆಗಾಗಿ ಈಗಾಗಲೇ 2 ತಿಂಗಳಿನಿಂದ ಕಾಮಗಾರಿಗಳು ಆರಂಭವಾಗಿದೆ. ಕಟ್ಟಡಗಳು ತಲೆ ಎತ್ತುತ್ತಿವೆ. ಈ ಯೋಜನೆಗೆ ಹೇಗೆ ಅನುಮತಿ ಸಿಕ್ಕಿತ್ತು ಎಂಬುಂದೇ ಯಾರಿಗೂ ಗೊತ್ತಿಲ್ಲ. ಸಿಡಬ್ಲೂಯುಸಿಯಿಂದ ಅನುಮತಿ ಪಡೆದಿಲ್ಲ. ಆದರೂ ಕೂಡ ಸದ್ದಿಲ್ಲದೆ ಕಾಮಗಾರಿ ಆರಂಭವಾಗಿದೆ. ವಸತಿ ಗೃಹ ಕೂಡ ತಲೆ ಎತ್ತುತ್ತಿದೆ. ಜಲಾಶಯಕ್ಕೆ ಅಪಾಯ ಆಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಈ ಯೋಜನೆಗಾಗಿ ಬೇರೆ ಕಡೆ ಭೂಮಿಯನ್ನು ಕೊಡಲಿ. 16 ಎಕರೆ ಏಕೆ. 25 ಎಕರೆ ಕೊಡಲಿ. ಆದರೆ ಜಲಾಶಯದ ತಳಭಾಗದಲ್ಲಿ ಬೇಡ. ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ದಡ್ಡತನದ ಉತ್ತರ ಕೊಡುತ್ತಾರೆ. ಇದು ನಾವು ಕೊಟ್ಟಿದಲ್ಲ. ಮೀನುಗಾರಿಕೆ ಇಲಾಖೆಯವರು ಅನುಮತಿ ಕೊಟ್ಟಿದ್ದಾರೆ ಎನ್ನುತ್ತಾರೆ. ಆದರೆ ನೀರಾವರಿ ಇಲಾಖೆಯವರು ಮೀನುಗಾರಿಕೆ ಇಲಾಖೆಯವರಿಗೆ ಗುತ್ತಿಗೆ ಆಧಾರದಲ್ಲಿ ಮೀನು ಸಾಕಲು ಕೊಟ್ಟಿರುತ್ತಾರೆ. ತಾವೇ ಗುತ್ತಿಗೆ ತೆಗೆದುಕೊಂಡು ಈ ಯೋಜನೆಗೆ ನೀರಾವರಿ ಇಲಾಖೆಯವರು ಹೇಗೆ ಅನುಮತಿ ಕೊಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ನೀರಾವರಿ ಮಂತ್ರಿ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಈ 500 ಕೋಟಿ ರೂ. ಯೋಜನೆಯ ವಿವರಗಳು ತಿಳಿದಿಲ್ಲವೇ. ಜಲ ಜೀವನ್ ಮೀಷನ್ ಅಡಿಯಲ್ಲಿ ಈ ಯೋಜನೆ ರೂಪಗೊಂಡಿದ್ದರೂ ಸಹ ಜಲಾಶಯದ ಭದ್ರತಾ ಪ್ರದೇಶದಲ್ಲಿ ಇದು ನಡೆಯುತ್ತಿದೆ ಎಂದು ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಹಾಗಾಗಿ ತಕ್ಷಣವೇ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಬೇಕು. ಅಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೂಡಲೇ ನಿಲ್ಲಬೇಕು. ಶುದ್ದ ನೀರಿನ ಘಟಕವನ್ನು ದೂರದ ಪ್ರದೇಶದಲ್ಲಿ ಸ್ಥಾಪಿಸಿ ಕುಡಿಯುವ ನೀರನ್ನು ಕೊಡಲಿ. ಆದರೆ, ಜಲಾಶಯವನ್ನೇ ಬುಡಮೇಲು ಮಾಡುವ ನಿಸರ್ಗಕ್ಕೆ ಮಾರಕವಾಗಿರುವ ಭದ್ರತೆಯೇ ಅಲ್ಲದ ಈ ಯೋಜನೆ ನಮಗೆ ಬೇಡ. ಸರ್ಕಾರ ಕೂಡಲೇ ಯೋಜನೆ ನಿಲ್ಲಿಸಬೇಕು. ಇಲ್ಲದಿದ್ದರೆ ರೈತರು, ಸಾರ್ವಜನಿಕರು ಸಂಘರ್ಷಕ್ಕೆ  ನಿಲ್ಲಬೇಕಾಗುತ್ತದೆ. 9 ಜಿಲ್ಲೆಯ ರೈತರು ಕೂಡ ಈ ಯೋಜನೆಯನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಯಶವಂತರಾವ್ ಘೋರ‍್ಪಡೆ, ಪುಟ್ಟಪ್ಪ, ಹಿರಣಯ್ಯ, ಜಗದೀಶ್ ನಾಯ್ಕ್, ಮೂಡಲಗಿರಿಯಪ್ಪ, ಕೃಷ್ಣಮೂರ್ತಿ, ಅಣ್ಣಪ್ಪ, ಮಂಜಪ್ಪ, ರಂಗೇಶಪ್ಪ ಸೇರಿದಂತೆ ಹಲವರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular