ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಕಾಂಗ್ರೆಸ್ ಪಕ್ಷ ಗಳಿಸಿದ್ದ ವರ್ಚಸ್ಸು ಹರಿಯಾಣ, ಜಮ್ಮು -ಕಾಶ್ಮೀರ ವಿಧಾನಸಭೆ ಚುನಾವಣೆಯ ನಂತರ ಕರಗಿ ಹೋಗಿದೆ.
ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನದ ಸಾಧನೆ ಬಗ್ಗೆ ಮಿತ್ರ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಪ್ರಾದೇಶಿಕ ಪಕ್ಷಗಳನ್ನು ಕೀಳಾಗಿ ನೋಡಿದ್ದೆ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಮಿತ್ರ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ‘ಇಂಡಿಯಾ”(INDIA) ಮೈತ್ರಿಕೂಟದಲ್ಲಿ ಪ್ರಾಬಲ್ಯದ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರಿ ನಿರಾಸೆಯಾಗಿದೆ.
ಹರಿಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶದ ಮೂಲಕ ಟೀಕಾ ಪ್ರಹಾರ ನಡೆಸಿವೆ. ಶಿವಸೇನೆ, ಸಮಾಜವಾದಿ ಪಕ್ಷ, ತೃಣ ಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಆರ್.ಜೆ.ಡಿ. ಸೇರಿದಂತೆ ಹಲವು ಪಕ್ಷಗಳು ಕಾಂಗ್ರೆಸ್ ನಾಯಕರ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿವೆ. ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ನೊಂದಿಗೆ ಜೊತೆಯಾಗಿ ಸರ್ಕಾರ ರಚಿಸಲಿರುವ ನ್ಯಾಷನಲ್ ಕಾನ್ಫರೆನ್ಸ್ ಕೂಡ ಕಾಂಗ್ರೆಸ್ ನಾಯಕರ ಕಾಲೆಳೆದಿದೆ. ಇದರಿಂದಾಗಿ ಮಿತ್ರ ಪಕ್ಷಗಳ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್ ಮಂಕಾದಂತಿದೆ.
ಪಕ್ಷದಲ್ಲಿನ ಒಳಜಗಳ, ಗುಂಪುಗಾರಿಕೆ ನಿಯಂತ್ರಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿಫಲವಾಗಿರುವುದೇ ದುಸ್ಥಿತಿಗೆ ಕಾರಣ ಎಂದು ಆರೋಪಿಸಲಾಗಿದೆ. ಹರಿಯಾಣ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ್ದು ಸೀಟು ಹಂಚಿಕೆಯಲ್ಲಿ ಸದಾ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿದ್ದ ಕಾಂಗ್ರೆಸ್ ಗೆ ಹಿನ್ನಡೆಯಾದಂತಾಗಿದೆ. ಬರಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ, ಉತ್ತರ ಪ್ರದೇಶದ 10 ಸ್ಥಾನಗಳ ಉಪಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗಿದೆ.
ಉತ್ತರಪ್ರದೇಶದಲ್ಲಿ ಮಿತ್ರ ಪಕ್ಷವಾಗಿರುವ ಸಮಾಜವಾದಿ ಪಾರ್ಟಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇಳಿದಷ್ಟು ಸ್ಥಾನಗಳನ್ನು ನೀಡಲು ನಿರಾಕರಿಸಿದೆ. ಕಾಂಗ್ರೆಸ್ ಪಕ್ಷ 10 ಸ್ಥಾನಗಳಲ್ಲಿ 5 ಸ್ಥಾನ ಬಿಟ್ಟು ಕೊಡುವಂತೆ ಕೇಳಿದ್ದು, ಇದಕ್ಕೆ ಒಪ್ಪದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ.
ಕಾಂಗ್ರೆಸ್ ಜೊತೆಗಿನ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿರುವ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ.
ಉದ್ದವ್ ಠಾಕ್ರೆ ಶಿವಸೇನೆ ಬಣ, ಹರಿಯಾಣ ಸೋಲಿನಿಂದ ಕಾಂಗ್ರೆಸ್ ಪಾಠ ಕಲಿಯಬೇಕು ಎಂದು ಹೇಳಿದೆ. ಗೆಲುವಿನ ಅವಕಾಶವನ್ನು ಸೋಲಾಗಿ ಪರಿವರ್ತಿಸುವ ಕಲೆಯನ್ನು ಕಾಂಗ್ರೆಸ್ ನಿಂದ ಕಲಿಯಬಹುದು ಎಂದು ಮಹಾರಾಷ್ಟ್ರದಲ್ಲಿ ತನ್ನ ಮಿತ್ರ ಪಕ್ಷವಾದ ಕಾಂಗ್ರೆಸ್ ನಾಯಕರಿಗೆ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಲಾಗಿದೆ.
ಕಾಂಗ್ರೆಸ್ ಸೋಲಿನ ಆತ್ಮಾವಲೋಕನ ಮಾಡಿಕೊಂಡು ಹೊಂದಾಣಿಕೆ ರಾಜಕೀಯ ದತ್ತ ಗಮನಹರಿಸಬೇಕು. ಮಿತ್ರ ಪಕ್ಷಗಳನ್ನು ಮೈತ್ರಿ ತತ್ವಗಳನ್ನು ಗೌರವಿಸಬೇಕು ಎಂದು ಆರ್‌ಜೆಡಿ ವಕ್ತಾರ ಪ್ರೊ. ಸುಭೋದ್ ಮೆಹ್ತಾ ಹೇಳಿದ್ದಾರೆ.
ಅಹಂಕಾರದಿಂದ ವರ್ತಿಸುವುದು, ಪ್ರಾದೇಶಿಕ ಪಕ್ಷಗಳನ್ನು ಕೀಳಾಗಿ ನೋಡುವುದು ಕಾಂಗ್ರೆಸ್ ಪಕ್ಷದ ದುರಂತದ ಸೂತ್ರ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಟೀಕಿಸಿದ್ದಾರೆ. ಹರಿಯಾಣ ಸೋಲು, ಜಮ್ಮು ಕಾಶ್ಮೀರದ ನೀರಸ ಪ್ರದರ್ಶನದಿಂದ ಮಿತ್ರ ಪಕ್ಷಗಳಿಂದಲೇ ಕಾಂಗ್ರೆಸ್ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.