ಉನಾ: ಅಂಬ್-ಅಂಡೌರಾ ನಿಲ್ದಾಣದಿಂದ ನವದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಹಿಮಾಚಲ ಪ್ರದೇಶದ ಉನಾದಲ್ಲಿ ಕಲ್ಲು ತೂರಲಾಗಿದೆ. ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ರೈಲಿನ ಕನಿಷ್ಠ ನಾಲ್ಕು ಬೋಗಿಗಳಿಗೆ ಹಾನಿಯಾಗಿದೆ.
ಶನಿವಾರ ಮಧ್ಯಾಹ್ನ 1:15 ರ ಸುಮಾರಿಗೆ ಬಸಲ್ ಗ್ರಾಮದ ಬಳಿ ರೈಲಿಗೆ ಕೆಲವು ಅಪರಿಚಿತರು ಕಲ್ಲು ಎಸೆದು ಎರಡು ಬೋಗಿಗಳ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸದ್ಯ ರೈಲಿಗೆ ಆಗಿರುವ ಹಾನಿಯ ಪ್ರಮಾಣವನ್ನು ಅಂದಾಜು ಮಾಡಲಾಗುತ್ತಿದೆ. ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಲು ಎಲ್ಲಾ ಅಗತ್ಯ ಪ್ರಯತ್ನಗಳು ನಡೆಯುತ್ತಿವೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 4 ರಂದು ಪಾಟ್ನಾದಿಂದ ಟಾಟಾನಗರಕ್ಕೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಜಾರ್ಖಂಡ್‌ನಲ್ಲಿ ಕಲ್ಲು ತೂರಲಾಗಿತ್ತು.