ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪ್ರತಿದಿನ ವ್ಯಾಯಾಮ ಸಹ ಮಾಡಲೇಬೇಕು. ಆದರೆ ಜಿಮ್‌ಗೆ ಹೋಗಲು ಎಷ್ಟೋ ಜನರಿಗೆ ಸಮಯವೇ ಇರುವುದಿಲ್ಲ. ವ್ಯಾಯಾಮ ಮಾಡಲು ಮನಸ್ಸಿಲ್ಲದಿದ್ದರೆ ವಾಕಿಂಗ್ ಉತ್ತಮ ಆಯ್ಕೆ. ಪ್ರತಿದಿನ ಕೇವಲ 40 ನಿಮಿಷಗಳ ಕಾಲ ನಡೆಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನಡಿಗೆ ಅತ್ಯಂತ ಸುಲಭ, ಇದು ನೈಸರ್ಗಿಕ ತಾಲೀಮು. ವಾಕಿಂಗ್ ಮಾಡುವುದರಿಂದ ಫಿಟ್ ಆಗಿರಬಹುದು ಜೊತೆಗೆ ಅನೇಕ ರೋಗಗಳನ್ನು ತಪ್ಪಿಸಬಹುದು. ಪ್ರತಿದಿನ 40 ನಿಮಿಷಗಳ ಕಾಲ ನಡೆಯುವುದರಿಂದ ಆಗುವ 5 ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಹೃದಯದ ಆರೋಗ್ಯ ಸುಧಾರಣೆ
ವಾಕಿಂಗ್, ಹೃದಯರಕ್ತನಾಳಕ್ಕೆ ಉತ್ತಮ ವ್ಯಾಯಾಮ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿದಿನ 40 ನಿಮಿಷಗಳ ಕಾಲ ನಡೆಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯಾಘಾತ, ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಕಾರಿ
ತೂಕ ಇಳಿಸಿಕೊಳ್ಳಲು ಬಯಸುವವರು ವಾಕಿಂಗ್ ಮಾಡಬೇಕು. ಕ್ಯಾಲೊರಿಗಳನ್ನು ಸುಡಲು ಇದು ಸುಲಭವಾದ ಮಾರ್ಗ. ಪ್ರತಿದಿನ 40 ನಿಮಿಷಗಳ ಕಾಲ ನಡೆಯುವುದರಿಂದ ಚಯಾಪಚಯ ಸುಧಾರಿಸುತ್ತದೆ, ಕೊಬ್ಬು ತ್ವರಿತವಾಗಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ದೈಹಿಕ ಸಮತೋಲನ ಕೂಡ ಸುಧಾರಿಸುತ್ತದೆ.
ಮಾನಸಿಕ ಆರೋಗ್ಯದಲ್ಲಿ ಸುಧಾರಣೆ
ನಡಿಗೆಯಿಂದ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಪ್ರಯೋಜನವಾಗುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಪ್ರತಿದಿನ 40 ನಿಮಿಷಗಳ ಕಾಲ ನಡೆಯುವುದರಿಂದ ಖಿನ್ನತೆಯ ಲಕ್ಷಣಗಳು ಕಡಿಮೆಯಾಗುತ್ತವೆ ಮತ್ತು ಮಾನಸಿಕ ಶಾಂತಿ ಸಿಗುತ್ತದೆ.
ಮೂಳೆಗಳು ಮತ್ತು ಕೀಲುಗಳಿಗೆ ಪ್ರಯೋಜನಕಾರಿ
ವಾಕಿಂಗ್ ಮೂಳೆಗಳು ಮತ್ತು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ವಾಕಿಂಗ್ ವಯಸ್ಸಾದವರಿಗೆ ಉತ್ತಮ ವ್ಯಾಯಾಮ. ಇದು ಕೀಲುಗಳ ಮೇಲೆ ಹೆಚ್ಚು ಒತ್ತಡ ಉಂಟುಮಾಡುವುದಿಲ್ಲ.
ರೋಗನಿರೋಧಕ ಶಕ್ತಿ ಹೆಚ್ಚಳ
ಪ್ರತಿನಿತ್ಯ ನಡೆಯುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಇದು ದೇಹದಲ್ಲಿ ಪ್ರತಿಕಾಯಗಳು ಮತ್ತು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ರೋಗಗಳ ವಿರುದ್ಧ ಹೋರಾಡುವುದು ಸುಲಭವಾಗುತ್ತದೆ.