ಬೆಂಗಳೂರು: ಹಬ್ಬದ ಸಂದರ್ಭದಲ್ಲಿಯೇ ಖಾದ್ಯ ತೈಲ ದರ ದಿಢೀರ್ ಏರಿಕೆ ಕಂಡಿದೆ. ಲೀಟರ್ ಗೆ 15 ರಿಂದ 20 ರೂಪಾಯಿವರೆಗೂ ಅಡುಗೆ ಎಣ್ಣೆ ದರ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಹೋಟೆಲ್ ಗಳು, ಮನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಸೂರ್ಯಕಾಂತಿ ಎಣ್ಣೆ ದರ ಪ್ರತಿ ಕೆಜಿಗೆ 110 ರಿಂದ 130ರೂ. ಗೆ ಹೆಚ್ಚಳವಾಗಿದ್ದು, ಶೇಂಗಾ ಎಣ್ಣೆ ದರ ಕೆಜಿಗೆ 145 ರಿಂದ 160 ರೂ.ಗೆ ಏರಿಕೆಯಾಗಿದೆ. ಸೋಯಾಬಿನ್, ತಾಳೆ ಎಣ್ಣೆ ದರ ಕೆಜಿಗೆ 15 ರೂಪಾಯಿವರೆಗೆ ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರ ಖಾದ್ಯ ತೈಲದ ಮೇಲಿನ ಮೂಲ ಕಸ್ಟಮ್ಸ್ ಸುಂಕ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಖಾದ್ಯ ತೈಲಗಳ ಚಿಲ್ಲರೆ ದರದಲ್ಲಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂದು ಹೇಳಲಾಗಿದೆ.
ಹಬ್ಬದ ಸಂದರ್ಭದಲ್ಲಿ ಅಡುಗೆ ಎಣ್ಣೆ ದರ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಅಡುಗೆ ಎಣ್ಣೆ ದರ ಕೆಜಿಗೆ ಒಂದರಿಂದ ಎರಡು ರೂಪಾಯಿ ಏರಿಕೆ ಆಗುತ್ತಿತ್ತು. ಈಗ ದಿಢೀರ್ 20 ರೂ. ಹೆಚ್ಚಳವಾಗಿರುವುದರಿಂದ ಹೋಟೆಲ್, ಬೇಕರಿಗಳಲ್ಲಿ ಊಟ, ತಿಂಡಿ, ಚಿಪ್ಸ್, ಸಿಹಿ ಪದಾರ್ಥ, ಇತರೆ ತಿನಿಸುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.