ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಸಾವಿನ ತನಿಖೆಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಶಾಲೆಯ ಪ್ರಾಂಶುಪಾಲರೇ ವಿದ್ಯಾರ್ಥಿನಿಯನ್ನ ಹತ್ಯೆ ಮಾಡಿದ್ದಾರೆ. 1ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಆಕೆಯ ಶಾಲೆಯ ಪ್ರಾಂಶುಪಾಲ ಲೈಂಗಿಕ ದೌರ್ಜನ್ಯವೆಸಗಿದ್ದು ಬಾಲಕಿ ವಿರೋಧಿಸಿದ ನಂತರ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ಆಕೆಯ ಶವವನ್ನು ಶಾಲೆಯ ಕಾಂಪೌಂಡ್‌ನಲ್ಲಿ ಮತ್ತು ಆಕೆಯ ಬ್ಯಾಗ್ ಮತ್ತು ಶೂಗಳನ್ನು ತರಗತಿಯ ಬಳಿ ಎಸೆದಿದ್ದಾನೆ. ಆರೋಪಿ 55 ವರ್ಷದ ಗೋವಿಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ರಾಜದೀಪ್ ಸಿಂಗ್ ಝಾಲಾ ಅವರು ಮಾತನಾಡಿ, ಆರು ವರ್ಷದ ಬಾಲಕಿಯ ಮೃತದೇಹ ಗುರುವಾರ ಸಂಜೆ ಶಾಲೆಯ ಆವರಣದಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು 10 ತಂಡಗಳನ್ನು ರಚಿಸಿ ತನಿಖೆ ನಡೆಸಿದರು. ಪ್ರತಿದಿನ ಪ್ರಾಂಶುಪಾಲ ಗೋವಿಂದ್ ಜೊತೆ ಬಾಲಕಿ ಶಾಲೆಗೆ ಹೋಗುತ್ತಿದ್ದಳು ಎಂದು ಆಕೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಆತನನ್ನು ವಿಚಾರಿಸಿದಾಗ ಪ್ರಾಂಶುಪಾಲ ಬಾಲಕಿಯನ್ನು ಶಾಲೆಗೆ ಬಿಟ್ಟು ಬೇರೆ ಕೆಲಸಕ್ಕೆ ಅಲ್ಲಿಂದ ತೆರಳಿದ್ದಾಗಿ ತಿಳಿಸಿದ್ದನು. ಆದರೆ ಈ ಬಗ್ಗೆ ಪೊಲೀಸರಿಗೆ ಅನುಮಾನ ಬಂತು. ಘಟನೆಯ ದಿನದಂದು ಗೋವಿಂದ್ ಅವರ ಫೋನ್ ಲೊಕೇಷನ್ ವಿವರಗಳನ್ನು ಪರಿಶೀಲಿಸಿದಾಗ, ಅವರು ಆ ದಿನ ತಡವಾಗಿ ಶಾಲೆಗೆ ತಲುಪಿರುವುದು ಕಂಡುಬಂದಿತು. ಮತ್ತೆ ವಿಚಾರಣೆ ಮಾಡಿದಾಗ ಪ್ರಾಂಶುಪಾಲ ಘೋರ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
“ಬೆಳಿಗ್ಗೆ 10.20 ರ ಸುಮಾರಿಗೆ ಬಾಲಕಿಯನ್ನು ಪ್ರಾಂಶುಪಾಲರು ಆಕೆಯ ಮನೆಯಿಂದ ಕರೆದೊಯ್ದಿದ್ದರು. ಬಾಲಕಿಯ ತಾಯಿ ಆಕೆಯನ್ನು ಪ್ರಿನ್ಸಿಪಾಲ್ ಕಾರಿನಲ್ಲಿ ಕೂರಿಸಿದ್ದರು. ಆದರೆ ಅವಳು ಅಂದು ಶಾಲೆಗೆ ತಲುಪಲಿಲ್ಲ ಎಂಬುದನ್ನ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಖಚಿತಪಡಿಸಿದ್ದರು. ಶಾಲೆಗೆ ಹೋಗುವ ದಾರಿಯಲ್ಲಿ ಪ್ರಾಂಶುಪಾಲರು ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದರು ಆಗ ಬಾಲಕಿ ಕೂಗಲು ಪ್ರಾರಂಭಿಸಿದ್ದಾಳೆ.
ಈ ವೇಳೆ ಪ್ರಾಂಶುಪಾಲ ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಶಾಲೆ ತಲುಪಿದ ಪ್ರಾಂಶುಪಾಲ ಬಾಲಕಿಯ ಶವವನ್ನು ಕಾರಿನಲ್ಲಿಟ್ಟು ಅದಕ್ಕೆ ಬೀಗ ಹಾಕಿದ್ದ. ಸಂಜೆ 5 ಗಂಟೆ ಸುಮಾರಿಗೆ, ಅವನು ಶವವನ್ನು ಶಾಲೆಯ ಕಟ್ಟಡದ ಹಿಂದೆ ಎಸೆದು ಬಾಲಕಿಯ ಶಾಲಾ ಬ್ಯಾಗ್ ಮತ್ತು ಶೂಗಳನ್ನು ಅವಳ ತರಗತಿಯ ಹೊರಗೆ ಹಾಕಿದ್ದ” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಆರಂಭದಲ್ಲಿ ತನಗೇನೂ ಗೊತ್ತಿಲ್ಲವೆಂಬಂತೆ ಇದ್ದ ಪ್ರಿನ್ಸಿಪಾಲ್ ತಾಂತ್ರಿಕ ಸಾಕ್ಯ್ಳಗಳ ನಂತರ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಕಟ್ಟುನಿಟ್ಟಿನ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಾಂಶುಪಾಲ ವಿರುದ್ಧ ಪ್ರಕರಣ ದಾಖಲಾಗಿದೆ.