ಉದ್ಯೋಗಿಗಳಿಗೆ ನೆರವಾಗಲು ಕಾರ್ಮಿಕ ಇಲಾಖೆ ಆಗಾಗ್ಗೆ ತನ್ನ ನೀತಿ ನಿಯಮಗಳಲ್ಲಿ ಬದಲಾವಣೆ ತಂದಿದ್ದು ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಚಂದಾದಾರರು (EPFO), ಸರ್ಕಾರಿ ನಿವೃತ್ತಿ ಉಳಿತಾಯ ವ್ಯವಸ್ಥಾಪಕರು ಈಗ ತಮ್ಮ ಖಾತೆಗಳಿಂದ ವೈಯಕ್ತಿಕ ಹಣಕಾಸಿನ ಅಗತ್ಯಗಳಿಗಾಗಿ 1 ಲಕ್ಷ ರೂಪಾಯಿವರೆಗೆ ಖಾತೆಯಿಂದ ಒಮ್ಮೆಲೇ ಹಿಂಪಡೆಯಬಹುದಾಗಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ. ಇದನ್ನು ಮೊದಲು 50,000 ರೂಪಾಯಿಗೆ ಮಿತಿಗೊಳಿಸಲಾಗಿತ್ತು.
ಕಾರ್ಮಿಕ ಸಚಿವಾಲಯವು ಹೊಸ ಡಿಜಿಟಲ್ ಆರ್ಕಿಟೆಕ್ಚರ್ ಸೇರಿದಂತೆ ಇಪಿಎಫ್‌ಒ ಕಾರ್ಯಾಚರಣೆಗಳಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿದೆ, ಜೊತೆಗೆ ಉದ್ಯೋಗಿಗಳು/ಕಾರ್ಮಿಕರು ಅನಾನುಕೂಲತೆಗಳನ್ನು ಎದುರಿಸದಂತೆ ಅವರಿಗೆ ಸ್ಪಂದಿಸುವಂತೆ ಮಾಡಲು ನಿಯಮಾವಳಿಗಳನ್ನು ಪರಿಚಯಿಸಿದೆ ಎಂದು ಸಚಿವರು ಹೇಳಿದರು. ಹೊಸ ಉದ್ಯೋಗಿಗಳು ಮತ್ತು ಪ್ರಸ್ತುತ ತಮ್ಮ ಉದ್ಯೋಗದಲ್ಲಿ ಆರು ತಿಂಗಳುಗಳನ್ನು ಪೂರ್ಣಗೊಳಿಸದ ಉದ್ಯೋಗಿಗಳು ಸಹ ಈಗ ಮೊತ್ತವನ್ನು ಹಿಂಪಡೆಯಲು ಅರ್ಹರಾಗಿದ್ದಾರೆ. ಈ ಮುನ್ನ ಅವರಿಗೆ ಇಂತಹ ಅವಕಾಶವಿರಲಿಲ್ಲ.
“ಮದುವೆ ಮತ್ತು ವೈದ್ಯಕೀಯ ಚಿಕಿತ್ಸೆ ಇತ್ಯಾದಿಗಳಂತಹ ವೆಚ್ಚಕ್ಕಾಗಿ ಜನರು ಸಾಮಾನ್ಯವಾಗಿ ತಮ್ಮ ಇಪಿಎಫ್ಒ ಉಳಿತಾಯದಲ್ಲಿ ಹಣ ಹಿಂಪಡೆಯುತ್ತಾರೆ. ನಾವು ಒಂದು ಬಾರಿಗೆ 1 ಲಕ್ಷ ರೂ.ಗೆ ಹಿಂಪಡೆಯುವ ಮಿತಿಯನ್ನು ಹೆಚ್ಚಿಸಿದ್ದೇವೆ” ಎಂದು ಕೇಂದ್ರ ಸರ್ಕಾರದ 100 ದಿನಗಳ ಸಂಭ್ರಮಾಚರಣೆಯಲ್ಲಿ ಸಂದರ್ಭದಲ್ಲಿ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.
ದಿನೇ ದಿನೇ ಕಳೆದಂತೆ ವಸ್ತುಗಳ ಬೆಲೆ ಮತ್ತು ವೆಚ್ಚಗಳು ಹೆಚ್ಚುತ್ತಿರುವುದರಿಂದ ಹೊಸ ಮಿತಿಯನ್ನು ಪರಿಚಯಿಸಲಾಗಿದೆ ಎನ್ನಲಾಗಿದೆ.