ಒತ್ತಡದ ಬದುಕಿನಲ್ಲಿ ನಿದ್ರಾಹೀನತೆ ಸಾಮಾನ್ಯ ಸಮಸ್ಯೆಯಾಗಿದೆ. ನಿದ್ರೆಯ ಕೊರತೆಯು ಅನೇಕ ಗಂಭೀರ ಕಾಯಿಲೆಗಳಿಗೆ ಕೂಡ ಕಾರಣವಾಗಬಹುದು. ಅನೇಕರು ರಾತ್ರಿಯಿಡೀ ನಿದ್ದೆ ಬರದೇ ಕಷ್ಟಪಡುತ್ತಾರೆ. ಇನ್ನು ಕೆಲವರು ಅರೆನಿದ್ರೆ ಮಾಡಿ ತಲೆನೋವಿನಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ರೀತಿ ನಿದ್ದೆ ಬಾರದೇ ತೊಂದರೆಗೊಳಗಾದವರು ಕೆಲವು ಸರಳ ಆಯುರ್ವೇದ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು. ಇದು ನಿದ್ದೆ ಮಾತ್ರೆಯಷ್ಟೇ ಪರಿಣಾಮಕಾರಿಯಾಗಿದೆ.
ನಿದ್ರೆಯ ಬಗ್ಗೆ ಆಯುರ್ವೇದ ಹೇಳುವುದೇನು?
ಆಯುರ್ವೇದದ ಪ್ರಕಾರ ನಿದ್ರೆ, ಆಹಾರ ಮತ್ತು ಬ್ರಹ್ಮಚರ್ಯ ಆರೋಗ್ಯದ ಮೂರು ಮುಖ್ಯ ಸ್ತಂಭಗಳು. ಒಳ್ಳೆಯ ನಿದ್ದೆ ಜೀರ್ಣಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಅಷ್ಟಾಂಗ ಹೃದಯಂ ಎಂಬ ಪ್ರಾಚೀನ ಆಯುರ್ವೇದ ಗ್ರಂಥದಲ್ಲಿ ನಿದ್ರೆಯ ಮಹತ್ವವನ್ನು ಒತ್ತಿಹೇಳಲಾಗಿದೆ.
ಉತ್ತಮ ನಿದ್ರೆ ಏಕೆ ಮುಖ್ಯ?
ಉತ್ತಮ ನಿದ್ರೆಯು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ದೇಹವು ಅಗತ್ಯವಾದ ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ.
ನಿದ್ರೆಯ ಸಮಸ್ಯೆ ಹೋಗಲಾಡಿಸಲು ಆಯುರ್ವೇದ ಪರಿಹಾರ…
ಮಲಗುವ ಮುನ್ನ ಸ್ನಾನ ಮಾಡಿ : ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ದೇಹದಿಂದ ಆಯಾಸ ದೂರವಾಗುತ್ತದೆ ಮತ್ತು ಉತ್ತಮ ನಿದ್ರೆ ಬರುತ್ತದೆ.
ಮಲಗುವ ಮುನ್ನ ತಿನ್ನಬೇಡಿ : ಮಲಗುವ ಕನಿಷ್ಠ ಎರಡು ಗಂಟೆಗಳ ಮೊದಲು ಊಟವನ್ನು ಸೇವಿಸಿ. ಮಲಗುವ ಕೆಲವೇ ನಿಮಿಷಗಳ ಮೊದಲು ಆಹಾರ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿದ್ದೆಗೆ ಅಡ್ಡಿಪಡಿಸುತ್ತದೆ.
ವಜ್ರಾಸನದಲ್ಲಿ ಕುಳಿತುಕೊಳ್ಳಿ : ಆಹಾರ ಸೇವಿಸಿದ ನಂತರ 15-20 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ನಿದ್ರೆಗೆ ತೊಂದರೆಯಾಗುವುದಿಲ್ಲ.
ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸಿ : ಮಲಗುವ ಮೊದಲು ಪಾದಗಳನ್ನು ಸ್ವಲ್ಪ ಸಮಯದವರೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಇದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.
ಕಾಲಗಳಿಗೆ ಮಸಾಜ್: ಪಾದಗಳ ಲಘು ಮಸಾಜ್‌ನಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ.
ಪುಸ್ತಕ ಓದಿ : ಮಲಗುವ ಮುನ್ನ ಒಳ್ಳೆಯ ಪುಸ್ತಕ ಓದುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಒಳ್ಳೆಯ ನಿದ್ರೆ ಬರುತ್ತದೆ.
ಇದಲ್ಲದೆ ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು ದಿನದಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡಿ. ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿ. ಮಲಗುವ ಮುನ್ನ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಬೇಡಿ.