ಮೊದಲ ಹೆಂಡ್ತಿ ಇರುವಾಗಲೇ ಮತ್ತೊಬ್ಬರನ್ನು ಮದುವೆಯಾಗುವುದು ಭಾರತದಲ್ಲಿ ಕಾನೂನಿಗೆ ವಿರುದ್ಧವಾದದ್ದು. ಆದರೆ ಭಾರತದ ಅದೊಂದು ಹಳ್ಳಿಯಲ್ಲಿ ಪುರುಷರು ವಿಶಿಷ್ಟ ಸಂಪ್ರದಾಯವನ್ನು ಹೊಂದಿದ್ದು ಅವರು ಎರಡು ಬಾರಿ ಮದುವೆಯಾಗುತ್ತಾರೆ. ಈ ಪದ್ಧತಿಯು ಹಳ್ಳಿಯಲ್ಲಿ ರೂಢಿಯಾಗಿದೆ.
ಎರಡು ಮದುವೆ ಆಗುವ ಸಂಪ್ರದಾಯಕ್ಕಿಂತ ಹೆಚ್ಚು ಆಶ್ಚರ್ಯಕರ ಸಂಗತಿಯೆಂದರೆ ಅದರ ಹಿಂದಿನ ಕಾರಣ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದ ಕಾರಣ ನಿಜಕ್ಕೂ ಬೆರಗು ಹುಟ್ಟಿಸುತ್ತೆ.
ಭಾರತ-ಪಾಕಿಸ್ತಾನ ಗಡಿಯ ಸಮೀಪದಲ್ಲಿರುವ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ದೇರಸರ್ ಗ್ರಾಮದಲ್ಲಿ ಇಂತಹ ವಿಶಿಷ್ಠ ಪದ್ಧತಿಯಿದೆ. ಈ ಗ್ರಾಮದಲ್ಲಿ ಪುರುಷರು ಎರಡು ಬಾರಿ ಮದುವೆಯಾಗುತ್ತಾರೆ. ಸ್ಥಳೀಯ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಎರಡು ಮದುವೆಯಾಗದಿದ್ದರೆ ಅವನನ್ನು ಗ್ರಾಮದಿಂದ ಹೊರಹಾಕಲಾಗುತ್ತದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಈ ಗ್ರಾಮದಲ್ಲಿ ಸುಮಾರು 600 ಜನರು ವಾಸಿಸುತ್ತಿದ್ದಾರೆ ಮತ್ತು ಗ್ರಾಮದ ಪ್ರತಿಯೊಬ್ಬ ಪುರುಷನಿಗೆ ಕನಿಷ್ಠ ಇಬ್ಬರು ಪತ್ನಿಯರಿದ್ದಾರೆ.
ಅಚ್ಚರಿ ಎನಿಸಿದರೂ ಈ ಸಂಪ್ರದಾಯದ ಹಿಂದಿನ ಕಾರಣ ಇನ್ನಷ್ಟು ಬೆರಗು ಮೂಡಿಸುತ್ತದೆ. ಗ್ರಾಮದ ನಿವಾಸಿಗಳು ಮೊದಲ ಹೆಂಡತಿಗೆ ಎಂದಿಗೂ ಮಕ್ಕಳಾಗುವುದಿಲ್ಲ ಎಂದು ನಂಬಿದ್ದಾರೆ. ಮಕ್ಕಳನ್ನು ಪಡೆಯಲು ಎರಡನೇ ಮದುವೆ ಅಗತ್ಯವೆಂದು ಪರಿಗಣಿಸಲಾಗಿದೆ. ಈ ವಿಶಿಷ್ಟ ನಂಬಿಕೆಯು ಹಳ್ಳಿಯ ಪುರುಷರು ತಮ್ಮ ಮೊದಲ ಮದುವೆಯ ನಂತರ ಎರಡನೇ ಬಾರಿಗೆ ಮದುವೆಯಾಗುವಂತೆ ಮಾಡುತ್ತದೆ.
ವಿಚಿತ್ರ ನಂಬಿಕೆಯ ಮೂಲವು ಬಹಳ ಹಿಂದಿನದು. ಗ್ರಾಮದಲ್ಲಿ ದಂಪತಿಗೆ ಬಹಳ ದಿನಗಳಿಂದ ಮಕ್ಕಳಾಗಿರಲಿಲ್ಲವಂತೆ. ಆತ ಎರಡನೇ ಮದುವೆಯಾದ ನಂತರ ಮಕ್ಕಳಾದವು. ಇದೇ ರೀತಿ ಗ್ರಾಮದ ಹಲವರ ಕುಟುಂಬದಲ್ಲಿ ಎರಡನೇ ಮದುವೆ ನಂತರ ಮಕ್ಕಳಾದವಂತೆ. ಇದರ ಬಳಿಕ ಎರಡು ಮದುವೆಗಳನ್ನು ಮಾಡುವ ಅಭ್ಯಾಸವು ಗ್ರಾಮದಲ್ಲಿ ಪ್ರಾರಂಭವಾಯಿತು.
ಈ ಅಸಾಮಾನ್ಯ ಸಂಪ್ರದಾಯದ ಹಿಂದೆ ಇನ್ನೊಂದು ಕಾರಣವಿದೆ. ಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ನೀರು ತರಲು ಮಹಿಳೆಯರು ಪ್ರತಿದಿನ ಕನಿಷ್ಠ 5 ಕಿಲೋಮೀಟರ್ ನಡೆದುಕೊಂಡು ಹೋಗಬೇಕು. ಗರ್ಭಿಣಿಯರಿಗೆ ನೀರು ತರಲು ಅಷ್ಟು ದೂರ ನಡೆಯುವುದು ತುಂಬಾ ಸವಾಲಿನ ಕೆಲಸ. ಆದ್ದರಿಂದ ನೀರು ತರಲು ಬಂದಾಗ ಮಹಿಳೆಯರಿಗೆ ಹೊರೆಯನ್ನು ಕಡಿಮೆ ಮಾಡಲು ಗ್ರಾಮದ ಪುರುಷರು ಎರಡನೇ ಮದುವೆಯಾಗುತ್ತಾರೆ ಎಂದು ನಂಬಲಾಗಿದೆ.