ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಖ್ಯಾತ ಪಾಪ್ ಸ್ಟಾರ್ ಹಾಗೂ ಹಾಲಿವುಡ್ ನಟಿ ಸೆಲೆನಾ ಗೋಮೆಜ್ ಶಾಕಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಸೆಲೆನಾ ಫ್ಯಾನ್ಸ್‌ಗೆ ನಿಜಕ್ಕೂ ಆಘಾತಕಾರಿ ವಿಚಾರ ಇದು. ಸುರಸುಂದರಿ ಸೆಲೆನಾ ಮಕ್ಕಳನ್ನು ಹೊಂದುವುದು ಅಸಾಧ್ಯವಂತೆ. ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ತಮಗೆ ಸುರಕ್ಷಿತ ಗರ್ಭಧಾರಣೆ ಸಾಧ್ಯವಿಲ್ಲ ಎಂದು ಸ್ವತಃ ಸೆಲೆನಾ ಬಹಿರಂಗಪಡಿಸಿದ್ದಾರೆ. ದುರದೃಷ್ಟವಶಾತ್ ತಮಗೆ ಸ್ವಂತ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ ಎಂದು ಆಕೆ ಅಳಲು ತೋಡಿಕೊಂಡಿದ್ದಾರೆ. ಸೆಲೆನಾಗೆ ಆಕೆಯ ಮತ್ತು ಮಗುವಿನ ಜೀವಕ್ಕೆ ಅಪಾಯ ತಂದೊಡ್ಡುವ ಅನೇಕ ಆರೋಗ್ಯ ಸಮಸ್ಯೆಗಳಿವೆಯಂತೆ.
ಕಳೆದ ಕೆಲವು ವರ್ಷಗಳಿಂದಲೂ ಸೆಲೆನಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. 2013 ರಲ್ಲಿ ಆಕೆಗೆ ಲೂಪಸ್ ದೃಢಪಟ್ಟಿತ್ತು. ಇದೊಂದು ಆಟೋ ಇಮ್ಯೂನ್ ಕಾಯಿಲೆ. ಇದರಲ್ಲಿ ಉರಿಯೂತವು ಕೀಲುಗಳು, ಚರ್ಮ, ಮೂತ್ರಪಿಂಡಗಳು, ರಕ್ತ ಕಣಗಳು, ಹೃದಯ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಲೂಪಸ್‌ನ ಸಾಮಾನ್ಯ ಲಕ್ಷಣಗಳೆಂದರೆ ಆಯಾಸ, ಕೀಲು ನೋವು, ದದ್ದು ಮತ್ತು ಜ್ವರ. ನಾಲ್ಕು ವರ್ಷಗಳ ನಂತರ 2017 ರಲ್ಲಿ ಸೆಲೆನಾ ಮೂತ್ರಪಿಂಡ ಕಸಿ ಮಾಡಿಸಿಕೊಂಡರು. ಆಕೆ ಫ್ರಾನ್ಸಿಯಾ ರೈಸಾ ಅವರಿಂದ ಮೂತ್ರಪಿಂಡವನ್ನು ಪಡೆದಿದ್ದರು.
2018 ರಲ್ಲಿ ಸೆಲೆನಾಗೆ ಬೈಪೋಲಾರ್ ಡಿಸಾರ್ಡರ್ ಇರುವುದು ಪತ್ತೆಯಾಗಿತ್ತು. ಇದು ವ್ಯಕ್ತಿಯ ಮನಸ್ಥಿತಿ ಮತ್ತು ಚಟುವಟಿಕೆಯ ಮಟ್ಟದಲ್ಲಿ ಅಸಹಜ ಬದಲಾವಣೆಗಳಿಂದ ನಿರೂಪಿಸಲ್ಪಟ್ಟ ಮಾನಸಿಕ ಸ್ಥಿತಿಯಾಗಿದೆ. ಬೈಪೋಲಾರ್ ಡಿಸಾರ್ಡರ್‌ಗೆ ಸೆಲೆನಾ ಔಷಧ ಸೇವಿಸಲೇಬೇಕು. ಈ ಪರಿಸ್ಥಿತಿಯಲ್ಲಿ ಆಕೆ ಗರ್ಭಧರಿಸುವುದು ಅಸಾಧ್ಯ. ಹಾಗಾಗಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಲು ಅಥವಾ ದತ್ತು ಪಡೆಯಲು ಸೆಲೆನಾ ಚಿಂತನೆ ನಡೆಸಿದ್ದಾರೆ. ಈ ಆಯ್ಕೆಗಳು ನಿಜಕ್ಕೂ ವರದಾನ ಎಂದಾಕೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಸ್ವಂತ ಮಗುವನ್ನು ಹೊಂದಲು ಸಾಧ್ಯವಾಗದೇ ಇರುವುದಕ್ಕೆ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.