ಕಲಬುರಗಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜೇವರ್ಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಭುಗೌಡ ಮಾಡಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.
ದೈಹಿಕ ಶಿಕ್ಷಕ ಪ್ರಭುಗೌಡ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಶಾಲೆಯ ಐವರು ವಿದ್ಯಾರ್ಥಿನಿಯರು ಲಿಖಿತ ದೂರು ನೀಡಿದ್ದರು. ಈ ಕುರಿತಾಗಿ ಜಂಟಿ ತಪಾಸಣಾ ವರದಿ ನೀಡುವಂತೆ ಜಿಲ್ಲಾಧಿಕಾರಿ ಫಜಿಯಾ ತರನ್ನುಮ್ ಅವರು ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಪ್ರಭು ದೊರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಾವಿದ್ ಕರಂಗಿ ಅವರಿಗೆ ಸೂಚಿಸಿದ್ದರು.
ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ವಿಚಾರಿಸಿದಾಗ ವಿದ್ಯಾರ್ಥಿನಿಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಮಾಹಿತಿ ನೀಡಿದ್ದರು. ಈ ವರದಿ ಆಧರಿಸಿ ಪ್ರಭುಗೌಡ ಅವರನ್ನು ಅಮಾನತು ಮಾಡಲಾಗಿದೆ.