ಡಾರ್ಲಿಂಗ್ ಪ್ರಭಾಸ್ ಅಕ್ಟೋಬರ್ 23 ರಂದು 45ನೇ ವಸಂತಕ್ಕೆ ಕಾಲಿಡಲಿದ್ದು, ಅವರ ಅಭಿಮಾನಿಗಳು ಹುಟ್ಟು ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಪ್ರಭಾಸ್ ನಟನೆಯ ‘ಈಶ್ವರ್’ ಅದೇ ದಿನದಂದು ಮರು ಬಿಡುಗಡೆಯಾಗಲಿದ್ದು, ಮತ್ತೊಮ್ಮೆ ತೆರೆ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ನವೆಂಬರ್ 11ರಂದು ತೆರೆಕಂಡಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ನವೆಂಬರ್ 11ಕ್ಕೆ 22 ವರ್ಷ ಕೂಡ ಪೂರೈಸಲಿದೆ.
ಜಯಂತ್ ಸಿ ಪರಂಜಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಶ್ರೀದೇವಿ ವಿಜಯ್ ಕುಮಾರ್ ಅಭಿನಯಿಸಿದ್ದು, ಕೃಷ್ಣ ನೋರಿ,ರೇವತಿ, ರವಿಕಾಂತ್, ಹನುಮಂತು, ಎನ್.ಹರಿ ಕೃಷ್ಣ, ಶಿವಕೃಷ್ಣ,ಕೊಲ್ಲ ಅಶೋಕ್ ಕುಮಾರ್, ಅಭಿನಯ ಕೃಷ್ಣ, ಬ್ರಹ್ಮಾನಂದಂ, ಅಲ್ಲಾರಿ ಸುಭಾಷಿಣಿ, ಪಾವಲ ಶ್ಯಾಮಲಾ, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಆರ್ ಪಿ ಪಟ್ನಾಯಕ್ ಸಂಗೀತ ಸಂಯೋಜನೆ ನೀಡಿದ್ದು, ಮಾರ್ತಾಡ್ ಕೆ ವೆಂಕಟೇಶ್ ಅವರ ಸಂಕಲನವಿದೆ. ಕೊಲ್ಲ ಅಶೋಕ್ ಕುಮಾರ್ ನಿರ್ಮಾಣ ಮಾಡಿದ್ದಾರೆ.