ಬೆಂಗಳೂರು: ನಟ ದುನಿಯಾ ವಿಜಯ್ ಅಭಿನಯದ ‘ಭೀಮ’ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಅವರು ಮಾಡುತ್ತಿರುವ ಮಾನವೀಯ ಕಾರ್ಯಗಳು ಸಾಕಷ್ಟು ವೈರಲ್ ಆಗುತ್ತಿದೆ. ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ನಟ ದುನಿಯಾ ವಿಜಯ್, ಮಾದಕ ವಸ್ತುಗಳಿಗೆ ಮಕ್ಕಳು, ಯುವಜನತೆ ಯಾವ ರೀತಿ ಬಲಿಯಾಗುತ್ತಿದ್ದಾರೆ ಎಂಬುದನ್ನು ಸ್ಟಿಂಗ್ ಆಪರೇಷನ್ ಮೂಲಕ ತೋರಿಸಿದ್ದಾರೆ.
ಬೆಂಗಳೂರು ಹೊರವಲಯದ ಮೆಡಿಕಲ್ ಶಾಪ್ ಒಂದರಲ್ಲಿ ರಾಜಾರೋಷವಾಗಿ ಮತ್ತುಬರುವ ಮಾತ್ರೆಗಳು ಸಿಗುತ್ತಿವೆ. ಇಂತಹ ಮಾತ್ರೆಗಳನ್ನು ಸೇವಿಸುವ ಮೂಲಕ ಇಂದಿನ ಯುವ ಜನತೆ ನಶೆ ಲೋಕದಲ್ಲಿ ತೇಲುತ್ತಾ, ಬದುಕು ಹಾಳುಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಿಂದ 70 ಕಿ.ಮೀ ದೂರವಿರುವ ಸ್ಥಳದಲ್ಲಿನ ಔಷಧಿ ಅಂಗಡಿಯಲ್ಲಿಯೂ ಇಂತಹ ವಸ್ತುಗಳು ಸಿಗುತ್ತಿವೆ.
ಟೈಡಲ್ ಎಂಬ ಮಾತ್ರೆಯಿಂದಾಗಿ ಇಂದಿನ ಯುವಜನತೆ, ಸಾಮಜ ಹಾಳಾಗುತ್ತಿದೆ. ಟೈಡಲ್ ಮಾತ್ರೆ ಹಾಗೂ ಅದರ ಇನ್ನೊಂದು ಅಂಶದ ಮಾತ್ರೆಗಳು ಚಿಕ್ಕಚಿಕ್ಕ ಪಟ್ಟಣಗಳಲ್ಲಿಯೂ ಸಿಗುತ್ತಿವೆ ಎಂಬುದನ್ನು ನಟ ದುನಿಯಾ ವಿಜಯ್ ಹಾಗೂ ತಂಡ ಸ್ಟಿಂಗ್ ಅಪರೇಷನ್ ಮೂಲಕ ಪತ್ತೆ ಮಾಡಿದೆ. ಈ ಮಾತ್ರೆಯೇ ಹೆಚ್ ಐವಿಗೆ ಕಾರಣವಾಗಿದೆ. ಇಂದಿನ ಯುವ ಪೀಳಿಗೆಯನ್ನು ದಾರಿ ತಪ್ಪಿಸುವಂತಹ ಮಾದಕ ವಸ್ತುಗಳ ಕಬಂದಬಾಹು ರಾಜ್ಯದ ಹಳ್ಳಿಹಳ್ಳಿಗಳಿಗೂ ಯಾವರೀತಿಯಲ್ಲಿ ವ್ಯಾಪಿಸುತ್ತಿರಬಹುದು ಎಂಬುದನ್ನು ಊಹಿಸಿ ಎಂದು ನಟ ದುನಿಯಾ ವಿಜಯ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಬೆಂಗಳೂರು ಪೊಲೀಸ್ ಆಯುಕ್ತರಿಗೂ ಟ್ಯಾಗ್ ಮಾಡಿರುವ ನಟ, ಇಂತಹ ಮಾತ್ರೆಗಳ ವಿರುದ್ಧ, ಔಷಧ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.