ಮೊಬೈಲ್ ಫೋನ್ ನೆಟ್ ವರ್ಕ್ ಪಡೆಯಲು ಪ್ರಯತ್ನಿಸುತ್ತಿದ್ದ ವೇಳೆ ತಾಯಿಯ ಕೈಯಲ್ಲಿದ್ದ ಹಸುಳೆ ಹೊಳೆಗೆ ಜಾರಿಬಿದ್ದು ಸಾವನ್ನಪ್ಪಿರುವ ಘೋರ ಘಟನೆ ಗೋವಾದ ಉಸ್ಗಾವೊದಲ್ಲಿ ನಡೆದಿದೆ.
ಫೋನ್ ಮಾಡಲು ತನ್ನ ಮನೆಯ ಹೊರಗೆ ಬಂದ ತಾಯಿ ತನ್ನಕೈಯಲ್ಲಿ ಹಿಡಿದುಕೊಂಡಿದ್ದ ಮಗುವಿನ ಹಿಡಿತವನ್ನು ಕಳೆದುಕೊಂಡಳು. ನಂತರ ಮಗು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸೃಷ್ಟಿಯಾಗಿದ್ದ ಹೊಳೆಯ ನೀರಿನಲ್ಲಿ ಬಿದ್ದಿದ್ದೆ. ತಕ್ಷಣ ಅದನ್ನು ರಕ್ಷಿಸಲು ಪ್ರಯತ್ನಿಸಿದರೂ ಮಗು ಪ್ರಜ್ಞೆ ಕಳೆದುಕೊಂಡಿತು, ಸ್ಥಳಕ್ಕೆ ಧಾವಿಸಿದ ತುರ್ತು ಸೇವೆಯ ಸಿಬ್ಬಂದಿ ಮಗು ಸಾವನ್ನಪ್ಪಿದೆ ಎಂದು ಘೋಷಿಸಿದರು.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, 21 ವರ್ಷದ ಶರ್ಮಿಳಾ ದೇವಿ ದಾಸ್ ಮತ್ತು ಅವರ ಪತಿ ಪ್ರಕಾಶ್ ಅವರ ಮಗ ಎಂದು ಗುರುತಿಸಲಾದ ಹಸುಳೆ ತನ್ನ ತಾಯಿಯ ತೋಳುಗಳಿಂದ ಜಾರಿದ ನಂತರ ಸಾವನ್ನಪ್ಪಿತು. ಬಳಿಕ ಮೃತದೇಹವನ್ನು ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು.
ಪೋಂಡಾ ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಈ ದುರಂತ ಘಟನೆಯ ಸಂಪೂರ್ಣ ಸನ್ನಿವೇಶವನ್ನು ನಿರ್ಧರಿಸಲು ಪಿಎಸ್ಐ ಸುಶಾಂತ್ ಗಾಂವ್ಕರ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ. ವರದಿಯ ಪ್ರಕಾರ ಶರ್ಮಿಳಾ ದೇವಿ ಮತ್ತು ಪ್ರಕಾಶ್ ಇಬ್ಬರೂ ಸ್ಥಳೀಯ ತೋಟಗಾರಿಕಾ ಫಾರ್ಮ್‌ನಲ್ಲಿ ಪಾಲಕರಾಗಿ ಕೆಲಸ ಮಾಡುತ್ತಿದ್ದು ಆ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.