HomeIndiaನೀನು ಕಪ್ಪಗಿದ್ದೀಯಾ ಎಂದು ಮದುವೆ ರದ್ದುಗೊಳಿಸಿದ ವರ; 3 ತಿಂಗಳ ಬಳಿಕ ಬಯಲಾಯ್ತು ಆತನ ಅಸಲಿ...

ನೀನು ಕಪ್ಪಗಿದ್ದೀಯಾ ಎಂದು ಮದುವೆ ರದ್ದುಗೊಳಿಸಿದ ವರ; 3 ತಿಂಗಳ ಬಳಿಕ ಬಯಲಾಯ್ತು ಆತನ ಅಸಲಿ ಬಣ್ಣ….!

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ ಮದುವೆಗೆ ಇನ್ನು 15 ದಿನಗಳಷ್ಟೇ ಬಾಕಿ ಇರುವಾಗ ವರ ಮದುವೆ ರದ್ದು ಮಾಡಿದ್ದಾನೆ. ಇದಕ್ಕೆ ಆತ ಕೊಟ್ಟ ಕಾರಣ ವಧು ಕಪ್ಪಗಿದ್ದಾಳೆಂದು. ವರನ ಈ ನಡೆ ವಧು ಮತ್ತು ಆಕೆಯ ಕುಟುಂಬವನ್ನು ಬೆಚ್ಚಿಬೀಳಿಸಿದೆ. ವರನು ವಧುವಿನ ಮೈಬಣ್ಣದ ಬಗ್ಗೆ ಕಾಮೆಂಟ್ ಮಾಡಿ ಮದುವೆಯನ್ನು ರದ್ದುಗೊಳಿಸಿದ ಬಳಿಕ ಆತನ ಅಸಲಿ ಬಣ್ಣ ಬಯಲಾಗಿದೆ. ವಧುವಿನ ಕಡೆಯವರು ವರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕುಮಾರಿ ಭಾರತಿ ಎಂಬ ಹುಡುಗಿಯ ವಿವಾಹವು ಝಾನ್ಸಿ ಜಿಲ್ಲೆಯ ಭಿತೌರಾ ನಿವಾಸಿ ರೂಪೇಶ್ ಅವರೊಂದಿಗೆ ನಿಶ್ಚಯವಾಗಿತ್ತು. ಸ್ವತಃ ರೂಪೇಶ್ ವಧುವನ್ನು ಇಷ್ಟಪಟ್ಟಿದ್ದ. ಇಬ್ಬರೂ ಕಳೆದ ವರ್ಷ ಜೂನ್ 2023 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ರೂಪೇಶ್ ಒಂದು ವರ್ಷ ಕಾಲ ವಧುವಿನ ಜೊತೆ ಮಾತನಾಡುತ್ತಿದ್ದ. ನಿಶ್ಚಿತಾರ್ಥದಲ್ಲಿ ಹುಡುಗಿಯ ಕಡೆಯವರು ಹುಡುಗನ ಕಡೆಯವರಿಗೆ 3 ಲಕ್ಷ ರೂಪಾಯಿ ನಗದನ್ನು ಕೊಟ್ಟಿದ್ದರು, ಅಷ್ಟೇ ಅಲ್ಲ ನಿಶ್ಚಿತಾರ್ಥಕ್ಕೆ ಪ್ರತ್ಯೇಕವಾಗಿ 50 ಸಾವಿರ ರೂ. ನೀಡಿದ್ದರು.

ನಂತರ ಮದುವೆ ದಿನಾಂಕ ಹತ್ತಿರ ಬರುತ್ತಿದ್ದಂತೆ ವಧುವಿನ ಕಡೆಯವರು ತಯಾರಿ ಆರಂಭಿಸಿದರು. ಮದುವೆ ಕಾರ್ಡ್‌ಗಳನ್ನು ಮುದ್ರಿಸಿ ಸಂಬಂಧಿಕರಿಗೆ ನೀಡುತ್ತಿದ್ದರು. ಆದರೆ ಮದುವೆಗೆ ಕೇವಲ 15 ದಿನ ಇರುವಾಗಲೇ ರೂಪೇಶ್ ಭಾರತಿಗೆ ಫೋನ್ ಮಾಡಿ ಹೊಲದಲ್ಲಿ ದುಡಿದು ನೀನು ಕಪ್ಪಗಾಗಿದ್ದೀಯ, ಈಗ ನಾನು ನಿನ್ನನ್ನು ಮದುವೆಯಾಗಲಾರೆ. ಮೇಕ್ಅಪ್ ಮಾಡಿಕೊ, ಬಹುಶಃ ನಿನಗೆ ಬೇರೆ ಯಾರಾದರೂ ಸಿಗಬಹುದು ಎಂದು ಹೇಳಿ 24 ಏಪ್ರಿಲ್ 2024 ರಂದು ನಡೆಯಬೇಕಿದ್ದ ಮದುವೆಯನ್ನ ರದ್ದು ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಷಯವನ್ನು ಭಾರತಿ ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಭಾವಿ ಅಳಿಯನ ಈ ಮಾತು ಅವರಿಗೂ ಇಷ್ಟವಾಗದೇ ಈ ಬಗ್ಗೆ ವಧುವಿನ ಪೋಷಕರೂ ವರನ ಮನೆಯವರೊಂದಿಗೆ ಮಾತನಾಡಲು ಯತ್ನಿಸಿದ್ದಾರೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರು ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂದು ಅರ್ಥಮಾಡಿಕೊಂಡರು. ಆದರೆ ಘಟನೆ ನಡೆದ ಮೂರು ತಿಂಗಳ ನಂತರ ವಧುವಿನ ಮನೆಯವರಿಗೆ ನಿಜವಾದ ವಿಷಯ ತಿಳಿದಿದೆ. ರೂಪೇಶ್ ಗೆ ಬೇರೆಡೆ ಮದುವೆ ನಿಶ್ಚಯವಾಗಿತ್ತು ಎಂಬುದು ಗೊತ್ತಾಗಿದೆ. ಅಲ್ಲಿಂದ ವರದಕ್ಷಿಣೆಯಾಗಿ 5 ಲಕ್ಷ ಪಡೆದಿದ್ದು ಭಾರತಿ ಜತೆಗಿನ ಸಂಬಂಧವನ್ನು ರೂಪೇಶ್ ಮುರಿದುಕೊಳ್ಳಲು ನೀನು ಕಪ್ಪಗಿದ್ದೀಯ ಎಂದು ಕಾರಣ ನೀಡಿದ್ದ ಎಂಬುದು ಗೊತ್ತಾಗಿದೆ. ಇದೀಗ ಭಾರತಿ ಕುಟುಂಬಸ್ಥರು ರೂಪೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಗಳು ನಿಜವೆಂದು ಕಂಡುಬಂದರೆ ವರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular