ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಭೆಯಿಂದ ಎದ್ದು ಹೊರನಡೆದ ಘಟನೆ ನಡೆದಿದೆ.
ನವದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಇನ್ನು ವಿಪಕ್ಷಗಳ ಮುಖ್ಯಮಂತ್ರಿಗಳ ಪೈಕಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಮೈಕ್ ಮ್ಯೂಟ್ ಮಾಡಿದ್ದಾರೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಸಭೆಯಿಂದ ಎದ್ದು ಹೊರ ನಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ನೀತಿ ಆಯೋಗದ ಸಭೆಯಲ್ಲಿ ಕೇವಲ 5 ನಿಮಿಷ ಮಾತ್ರ ಮಾತನಾಡಲು ನನಗೆ ಅವಕಾಶ ನೀಡಿದ್ದರು. ಉಳಿದ ರಾಜ್ಯಗಳ ಮುಖ್ಯಮಂತ್ರಿಗಳಿಗೆ 20 ನಿಮಿಷಗಳ ಕಾಲಾವಕಾಶ ನೀಡಿದ್ದಾರೆ. ಅಲ್ಲದೇ ಪಶ್ಚಿಮ ಬಂಗಾಳಕ್ಕೆ ಹಣಕಾಸು ನೆರವು ನೀಡುವಂತೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ನನ್ನ ಮೈಕ್ ಮ್ಯೂಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾರತಮ್ಯ ನೀತಿ ಹಿನ್ನೆಲೆಯಲ್ಲಿ ಪ್ರತಿಭಟಿಸಿ ಸಭೆಯಿಂದ ಎದ್ದು ಬಂದಿದ್ದಾಗಿ ತಿಳಿಸಿದ್ದಾರೆ.