ಚೆನ್ನೈ: ಶಾಲಾ ವರ್ಗಾವಣೆ ಪ್ರಮಾಣ ಪತ್ರ(ಟಿಸಿ)ದಲ್ಲಿ ಶುಲ್ಕ ಬಾಕಿ ನಮೂದಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಶಾಲಾ ವರ್ಗಾವಣೆ ಪತ್ರಗಳು ಶುಲ್ಕ ಸಂಗ್ರಹದ ಸಾಧನವಲ್ಲ. ಶಾಲಾ ವರ್ಗಾವಣೆ ಪತ್ರಗಳು ಮಗುವಿನ ವೈಯಕ್ತಿಕ ದಾಖಲೆಯಾಗಿದೆ. ಅದರಲ್ಲಿ ಶುಲ್ಕ ಬಾಕಿಯ ವಿವರಗಳನ್ನು ನಮೂದಿಸಬಾರದು ಎಂದು ಹೈಕೋರ್ಟ್ ತಾಕೀತು ಮಾಡಿದೆ.
ಪ್ರವೇಶದ ಸಂದರ್ಭದಲ್ಲಿ ಟಿಸಿಯಲ್ಲಿ ಶುಲ್ಕ ಬಾಕಿ ಅಥವಾ ವಿಳಂಬ ಪಾವತಿ ಸಹಿತ ಯಾವುದೇ ಅನಗತ್ಯ ವಿಚಾರಗಳನ್ನು ಉಲ್ಲೇಖಿಸದಂತೆ ಸೂಚನೆ ನೀಡಿ ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಅಥವಾ ಆದೇಶ ಹೊರಡಿಸಲು ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದನ್ನು ಉಲ್ಲಂಘಿಸಿದರೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(RTE) ಕಾನೂನಿನ 17ನೇ ಸೆಕ್ಷನ್ ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾಯಿದೆಗಳ ಅಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಎನ್.ಎಂ. ಸುಬ್ರಹ್ಮಣ್ಯಂ ಮತ್ತು ಸಿ. ಕುಮಾರಪ್ಪನ್ ಅವರಿದ್ದ ವಿಭಾಗೀಯ ಪೀಠದಿಂದ ಎಚ್ಚರಿಕೆ ನೀಡಲಾಗಿದೆ ಶುಲ್ಕ ಪಾವತಿಸದಿರುವುದು ಅಥವಾ ವಿಳಂಬಕ್ಕೆ ಮಕ್ಕಳನ್ನು ಶಿಕ್ಷಿಸುವುದು ಕ್ರೌರ್ಯಕ್ಕೆ ಸಮನಾಗುತ್ತದೆ. ಬಾಲ ನ್ಯಾಯ ಕಾನೂನಿನ 75 ಸೆಕ್ಷನ್ ನಡಿ ಅಪರಾಧವಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.