ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಗೆ ಇಡಿ ಬಂಧನ ಭೀತಿ ಶುರುವಾಗಿದೆ.
ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ನಿಗಮದ ಅಧ್ಯಕ್ಷ, ಶಾಸಕ ದದ್ದಲ್ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ದದ್ದಲ್ ಗೂ ಇಡಿ ಬಂಧನ ಭೀತಿ ಶುರುವಾಗಿದೆ.
ಬಂಧನ ಭೀತಿಯಲ್ಲಿರುವ ದದ್ದಲ್, ಕಳೆದ ಎರಡು ಮೂರು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇ ಅಜ್ಞಾತ ಸ್ಥಳದಲ್ಲಿ ಇದ್ದಾರೆ ಎನ್ನಲಾಗಿತ್ತು. ಆದರೆ ಇಂದು ಬೆಳಿಗ್ಗೆ ರಾಯಚೂರಿನಲ್ಲಿ ಪ್ರತ್ಯಕ್ಷವಾಗಿರುವ ದದ್ದಲ್, ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ಖಾಸಗಿ ಕಾರಿನಲ್ಲಿ ಮಂತ್ರಾಲಯ ಮಾರ್ಗವಾಗಿ ದದ್ದಲ್ ಎಸ್ಕೇಪ್ ಆಗಿದ್ದಾರೆ.