ಕೇಂದ್ರದಿಂದ ರಾಜ್ಯಗಳಿಗೆ ಸರಿಯಾಗಿ ತೆರಿಗೆ ಪಾಲು ದೊರೆಯುತ್ತಿಲ್ಲ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಕೇಂದ್ರದಿಂದ ರಾಜ್ಯಗಳಿಗೆ ಸರಿಯಾಗಿ ತೆರಿಗೆ ಪಾಲು ದೊರೆಯುತ್ತಿಲ್ಲ ಎಂಬ ಕೂಗು ಎದ್ದಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಇಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಆಯೋಜಿಸಿದ್ದ ಜಿ.ಎಸ್.ಟಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, 2024-25 ನೇ ಸಾಲಿನ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಜಾ ಸರ್ಕಾರಕ್ಕೂ ಮುನ್ನ ರಾಜರುಗಳ ಕಾಲದಿಂದಲೂ ತೆರಿಗೆ ಪದ್ಧತಿ ಇತ್ತು ಎನ್ನುವುದನ್ನು ಅನೇಕ ಶಾಸನಗಳಲ್ಲಿ ನಾವು ಕಾಣಬಹುದು. ಕದಂಬರು ಕರ್ನಾಟಕದಲ್ಲಿ ಮಾರಾಟ ತೆರಿಗೆಯನ್ನು ಪ್ರಾರಂಭಿಸಿದರು ಎಂದು ಶಾಸನಗಳು ಹೇಳುತ್ತವೆ. ರಾಜ್ಯ ನಡೆಸಲು ತೆರಿಗೆ ಅಗತ್ಯ. ತೆರಿಗೆ ಕೊಡಲು ಸಾಧ್ಯವಿದ್ದವರು ಮಾತ್ರ ತೆರಿಗೆಯನ್ನು ಕೊಡುತ್ತಾರೆ. ಪ್ರತಿ ಸರ್ಕಾರವೂ ಕೂಡ ತೆರಿಗೆಗಳನ್ನು ಸಂಗ್ರಹ ಮಾಡಿಯೇ ದೇಶವನ್ನು, ರಾಜ್ಯವನ್ನು ನಡೆಸುತ್ತದೆ.  ಸಂವಿಧಾನ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರ ಕೊಟ್ಟಿದೆ ಎಂದರು.

ಕರ್ನಾಟಕ ಸರ್ಕಾರ ಜಿ.ಎಸ್.ಟಿ.ಗೂ ಮುನ್ನವೇ ವ್ಯಾಟ್ ಮೂಲಕ ತೆರಿಗೆ ವಸೂಲು ಮಾಡುತ್ತಿತ್ತು. ಜಿ.ಎಸ್.ಟಿ. ಪರೋಕ್ಷ ತೆರಿಗೆಯಾಯಾಗಿದೆ. ಕೇಂದ್ರದಿಂದ ರಾಜ್ಯಗಳಿಗೆ ಸರಿಯಾಗಿ ತೆರಿಗೆ ಪಾಲು ದೊರೆಯುತ್ತಿಲ್ಲ ಎಂಬ ಕೂಗು ಎದ್ದಿದೆ.  ಪ್ರಸ್ತುತ 16ನೇ ಹಣಕಾಸು ಆಯೋಗ ರಚನೆಯಾಗುತ್ತಿದೆ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳಿಗೆ ಸೂಕ್ತ ರೀತಿಯಲ್ಲಿ ತೆರಿಗೆ ಹಂಚಿಕೆಯಾಗಬೇಕೆಂದು ಒತ್ತಾಯಿಸಿದರು.

15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಶೇ.1.7% ರಷ್ಟು ತೆರಿಗೆ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ, ಸಂಸದರು ಹಾಗೂ ಪ್ರಧಾನಿಗಳ ಗಮನಕ್ಕೆ  ತರುವ ಪ್ರಯತ್ನ ಮಾಡಿದ್ದೇವೆ. ಹೆಚ್ಚು ತೆರಿಗೆ ಸಂಗ್ರಹವಾದರೆ ರಾಜ್ಯದ ಅಭಿವೃದ್ಧಿ ಸಾಧ್ಯ. ಗ್ಯಾರಂಟಿ ಯೋಜನೆಗಳಿಗೆ 60,000 ಕೋಟಿ ರೂಪಾಯಿಗಳ ಅಗತ್ಯವಿದೆ.  ಸಮಾಜದ ಅಸಮಾನತೆ ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಆಗ ಮಾತ್ರ ಸಮಾನತೆ ಬರಲು ಸಾಧ್ಯ. ಆರ್ಥಿಕವಾಗಿ ದುರ್ಬಲರಾದವರಿಗೆ ವಿಶೇಷ ಕಾರ್ಯಕ್ರಮ ನೀಡಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಎಲ್ಲಾ ಧರ್ಮದ, ಎಲ್ಲಾ ಜಾತಿಗಳ ಬಡವರಿಗೆ ಶಕ್ತಿ ತುಂಬಬೇಕಾದರೆ ಸಂಪನ್ಮೂಲ ಇರಬೇಕಾದುದ್ದು ಅಗತ್ಯ ಎಂದು ಹೇಳಿದ್ದಾರೆ.

ತೆರಿಗೆ ಸೋರಿಹೋಗದಂತೆ ವಾಣಿಜ್ಯ ತೆರಿಗೆ ಇಲಾಖೆ ಪ್ರಯತ್ನ ಮಾಡುತ್ತದೆ. 2022-23 ನೇ ಸಾಲಿನಲ್ಲಿ 1,22,821 ಕೋಟಿ ತೆರಿಗೆ ಸಂಗ್ರಹವಾಗಿದೆ. 2023-24 ನೇ ಸಾಲಿನಲ್ಲಿ 1,45,266 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ವಾಣಿಜ್ಯ ತೆರಿಗೆ ಇಲಾಖೆ ಉತ್ತಮ ಕೆಲಸ ಮಾಡಿದೆ ಎಂದರು.

ವಾಣಿಜ್ಯ ತೆರಿಗೆ ಇಲಾಖೆಯ 65 ಜನರಿಗೆ ಪ್ರಶಸ್ತಿಗಳನ್ನು ಇಂದು ವಿತರಿಸಲಾಗಿದ್ದು, ಉಳಿದ ಆರು ಸಾವಿರ ಅಧಿಕಾರಿಗಳು ಸಹ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಕಾರ್ಯಕ್ರಮ ಇತರರಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಕೆ.ಗೋವಿಂದರಾಜು ಹಾಗೂ ನಜೀರ್ ಅಹ್ಮದ್, ಆರ್ಥಿಕ ಇಲಾಖೆ ಹಾಗೂ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್ ಮತ್ತಿತರರು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read