ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಗುಡ್‌ನ್ಯೂಸ್ ಇದೆ. ಬಹಳ ದಿನಗಳಿಂದ ಕಾಯುತ್ತಿರುವ 8ನೇ ವೇತನ ಆಯೋಗ ತನ್ನ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಕರಡು ವರದಿ ಸಿದ್ಧಪಡಿಸಲು ಸಭೆಗಳನ್ನು ನಡೆಸುತ್ತಿದೆ.
8ನೇ ವೇತನ ಆಯೋಗದ ಈ ಕರಡು ವರದಿ ತಯಾರಿಕೆಯ ಪ್ರಕ್ರಿಯೆ ಬಹಳ ಮಹತ್ವದ್ದಾಗಿದೆ. ಆಯೋಗವು ಔಪಚಾರಿಕವಾಗಿ ಸಮಾಲೋಚನೆಗಳನ್ನು ಪ್ರಾರಂಭಿಸುವ ಮೊದಲು ನೌಕರರ ಸಂಘಗಳು ತಮ್ಮ ಬೇಡಿಕೆಗಳ ಏಕೀಕೃತ ಮತ್ತು ವಿವರವಾದ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸುತ್ತವೆ.
ರಾಷ್ಟ್ರೀಯ ಮಂಡಳಿಯ (ಸಿಬ್ಬಂದಿ ವಿಭಾಗ) ಕರಡು ಸಮಿತಿಯು ಒಂದು ವಾರ ಸರಣಿಯಾಗಿ ಮಹತ್ವದ ಸಭೆಗಳನ್ನು ನಡೆಸಲಿದೆ. ಇದು 1.2 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ನಿರೀಕ್ಷೆಯನ್ನು ಹೆಚ್ಚಿಸಿದೆ.
8ನೇ ಕೇಂದ್ರ ವೇತನ ಆಯೋಗಕ್ಕೆ ಸಲ್ಲಿಸಬೇಕಾದ ಸಾಮಾನ್ಯ ಬೇಡಿಕೆಗಳನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಜನಪಥ್‌ನಲ್ಲಿರುವ ಚಂದ್ರಲೋಕ್ ಕಟ್ಟಡದಲ್ಲಿ 8ನೇ ವೇತನ ಆಯೋಗಕ್ಕೆ ಕಚೇರಿಯನ್ನು ನಿಗದಿಪಡಿಸಿದೆ.
ಈ ಸಭೆಗಳ ಮೂಲಕ ಆಯೋಗವು ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಆಯೋಗಕ್ಕೆ ಅಗತ್ಯವಿರುವ ಇತರ ಸಿಬ್ಬಂದಿ ನೇಮಕದ ಕುರಿತು ಸಹ ಗಮನಹರಿಸಿದ್ದಾರೆ.
ನೌಕರರ ಸಂಘಗಳು ಮೊದಲು ತಮ್ಮ ಬೇಡಿಕೆಗಳ ಏಕೀಕೃತ ಮತ್ತು ವಿವರವಾದ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಕೆ ಮಾಡಲಿವೆ. ಬಳಿಕ ಆಯೋಗ ಅವರ ಜೊತೆ ಸುಧೀರ್ಘ ಸಭೆಗಳನ್ನು ನಡೆಸಿ, ಅಭಿಪ್ರಾಯವನ್ನು ಸಂಗ್ರಹ ಮಾಡಲಿದೆ. ಕಾರ್ಮಿಕ ಒಕ್ಕೂಟಗಳು ಆಯೋಗದ ವಿರುದ್ಧ ಅಸಮಾಧಾನಗೊಂಡಿದ್ದು, ನಿರೀಕ್ಷೆಯಷ್ಟು ವೇಗವಾಗಿ ಕೆಲಸ ಸಾಗುತ್ತಿಲ್ಲ ಎಂದು ಹೇಳಿವೆ.
ಫಿಟ್‌ಮೆಂಟ್ ಫ್ಯಾಕ್ಟರ್ (fitment factor), ಪಿಂಚಣಿ ಸುಧಾರಣೆಗಳು ಮತ್ತು ವೇತನ ಹೆಚ್ಚಳದಂತಹ ವಿಷಯಗಳು ಆಯೋಗದ ಅಧಿಕೃತ ಕಾರ್ಯವ್ಯಾಪ್ತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿಲ್ಲ. ಆಯೋಗವು ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ನೌಕರರ ಸಂಘದ ಒತ್ತಾಯವಾಗಿದೆ.
ಅಂಚೆ ನೌಕರರ ಒಕ್ಕೂಟವು ಎಲ್ಲಾ ನೌಕರರಿಗೂ ಒಂದೇ ರೀತಿಯ ಸಮಾನ ಗುಣಕವನ್ನು ನೀಡುವ ಬದಲು, ವಿವಿಧ ಹಂತದ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ಆಯೋಗ ಈ ಕುರಿತು ಪ್ರಾಥಮಿಕ ಹಂತದ ಪರಿಶೀಲನೆ ನಡೆಸಲಿದೆ.
ಸಂಘದ ಮತ್ತೊಂದು ಪ್ರಮುಖ ಬೇಡಿಕೆ ವಾರ್ಷಿಕ ವೇತನ ಏರಿಕೆಗೆ ಸಂಬಂಧಿಸಿದ್ದಾಗಿದೆ. ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು ಶೇಕಡಾ 3 ರಷ್ಟು ವಾರ್ಷಿಕ ವೇತನ ಏರಿಕೆಯನ್ನು ಪಡೆಯುತ್ತಿದ್ದಾರೆ. ನೌಕರರ ಒಕ್ಕೂಟಗಳು ಇದನ್ನು ಶೇಕಡಾ 7ಕ್ಕೆ ಏರಿಸಬೇಕೆಂದು ಒತ್ತಾಯಿಸುತ್ತಿವೆ. ಏರುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚದ ಪರಿಸ್ಥಿತಿಯಲ್ಲಿ ಇದು ಅತ್ಯಗತ್ಯ ಎಂಬುದು ವಾದವಾಗಿದೆ.
ಹಳೆ ಪಿಂಚಣಿ ವ್ಯವಸ್ಥೆ: ಮತ್ತೊಂದು ಪ್ರಮುಖ ಬೇಡಿಕೆಯೆಂದರೆ ಹಳೆಯ ಪಿಂಚಣಿ ಯೋಜನೆ (OPS) ಯನ್ನು ಮರು ಸ್ಥಾಪಿಸುವುದು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮತ್ತು ಏಕೀಕೃತ ಪಿಂಚಣಿ ಯೋಜನೆ (UPS) ಯನ್ನು ರದ್ದುಗೊಳಿಸಿ, ಸಂಪೂರ್ಣವಾಗಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಯಾಗಬೇಕು ಎಂದು ಹಲವಾರು ಒಕ್ಕೂಟಗಳು ಬೇಡಿಕೆ ಇಟ್ಟಿವೆ.
ನಿವೃತ್ತಿಯ ನಂತರದ ಸಾಮಾಜಿಕ ಭದ್ರತೆಗಾಗಿ ನಿರ್ದಿಷ್ಟ-ಪ್ರಯೋಜನದ ಪಿಂಚಣಿ ವ್ಯವಸ್ಥೆ ಅತ್ಯಗತ್ಯ ಎಂದು ಸಂಘಟನೆಗಳು ವಾದಿಸುತ್ತಿವೆ. ಆದರೆ, ಸರ್ಕಾರದ ಮಟ್ಟದಲ್ಲಿ ಎನ್‌ಪಿಎಸ್ ದೀರ್ಘಾವಧಿಯಲ್ಲಿ ಆರ್ಥಿಕವಾಗಿ ಸುಸ್ಥಿರವಾಗಿದೆ ಎಂಬ ನಿಲುವು ಇದ್ದು, ಆಯೋಗ ಈ ಕುರಿತು ಯಾವ ಶಿಫಾರಸು ಮಾಡಲಿದೆ ಎಂದು ಕಾದು ನೋಡಬೇಕಿದೆ.

