ಗುಜರಾತ್ : ಗುಜರಾತ್ ನಲ್ಲಿ ಸೇತುವೆ ಕುಸಿದು ಬಿದ್ದು 8 ಮಂದಿ ಮೃತಪಟ್ಟಿದ್ದು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬುಧವಾರ ಬೆಳಿಗ್ಗೆ ಗುಜರಾತ್ನ ಗಂಭೀರಾ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, ಇನ್ನೂ ಅನೇಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ವಡೋದರಾ ಜಿಲ್ಲೆಯ ಪದ್ರಾದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಸೇತುವೆ ಕುಸಿದಿದೆ. ರಾಜ್ಯ ಹೆದ್ದಾರಿಯ ಉದ್ದಕ್ಕೂ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ವಡೋದರಾ ಮತ್ತು ಆನಂದ್ ಅನ್ನು ಸಂಪರ್ಕಿಸುತ್ತದೆ.
ಘಟನೆಯ ನಂತರ ಹಲವಾರು ವಾಹನಗಳು ನೀರಿನೊಳಗೆ ಮುಳುಗಿವೆ. ಇಲ್ಲಿಯವರೆಗೆ ನಾಲ್ವರನ್ನು ರಕ್ಷಿಸಲಾಗಿದೆ ಎಂದು ಪದ್ರಾ ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಚರಣ್ ವರದಿ ಮಾಡಿದ್ದಾರೆ. ಮುಳುಗಿದ ವಾಹನಗಳಲ್ಲಿ ಎರಡು ಟ್ರಕ್ಗಳು ಮತ್ತು ಎರಡು ವ್ಯಾನ್ಗಳು ಸೇರಿವೆ. ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯ ಕಾರ್ಯದರ್ಶಿ ಪಿಆರ್ ಪಟೇಲಿಯಾ ಅವರ ಪ್ರಕಾರ, ತಜ್ಞರ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಪಿಆರ್ ಪಟೇಲಿಯಾ, “ಗಂಭೀರ ಸೇತುವೆಗೆ ಹಾನಿಯಾಗಿದ್ದು ಅಪಘಾತಕ್ಕೆ ಕಾರಣವಾದ ಬಗ್ಗೆ ನಮಗೆ ಮಾಹಿತಿ ಬಂದಿದೆ. ತಜ್ಞರ ತಂಡವನ್ನು ಘಟನೆಯ ಸ್ಥಳಕ್ಕೆ ಕಳುಹಿಸಲಾಗಿದೆ” ಎಂದು ಹೇಳಿದರು.

