ರೊಟ್ಟಿ ಜೊತೆ ಬೆಸ್ಟ್ ಹುರುಳಿಕಾಳಿನ ಜುನುಕ

ಜುನುಕ ಎಂದ ಕೂಡಲೇ ಇದ್ಯಾವುದೋ ಬೇರೆ ರಾಜ್ಯದ ಅಡುಗೆ ಇರಬಹುದು ಎಂದುಕೊಂಡರೆ ನಿಮ್ಮ ಊಹೆ ನೂರಕ್ಕೆ ನೂರರಷ್ಟು ಸರಿ. ಜುನುಕಾ ಮಹಾರಾಷ್ಟ್ರ ಮೂಲದ ಖಾದ್ಯ. ಸಾಮಾನ್ಯವಾಗಿ ಇದನ್ನು ಕಡಲೆಹಿಟ್ಟಿನಲ್ಲಿ ಮಾಡುತ್ತಾರೆ. ಆದರೆ ಹುರುಳಿಕಾಳಿನ ಹಿಟ್ಟಿನಲ್ಲಿ ಜುನುಕ ಮಾಡಿದರೆ ಅದ್ಭುತ ರುಚಿಯ ಜೊತೆ ಆರೋಗ್ಯಕ್ಕೂ ಪ್ಲಸ್ ಪಾಯಿಂಟ್.

ಹುರುಳಿ ಪೋಷಕಾಂಶಗಳ ಆಗರ ಎಂಬುದು ನಿಮಗೆ ಗೊತ್ತೇ ಇದೆ. ಕುದುರೆಯ ಕಾಲಿಗೆ ಶಕ್ತಿ ತುಂಬುವುದೇ ಹುರುಳಿಕಾಳಿನಿಂದ. ಹುರುಳಿ ಕಟ್ಟಿನಲ್ಲಿ ಸಾರು, ಬೇಯಿಸಿದ ಹುರುಳಿಯಲ್ಲಿ ಪಲ್ಯ, ಹುರುಳಿ ಹಪ್ಪಳ ಹೀಗೆ ಅನೇಕ ತಿನಿಸನ್ನು ತಿಂದಿರಬಹುದು. ಆದರೆ ಹುರುಳಿ ಹಿಟ್ಟಿನ ಜುನುಕವನ್ನು ಒಮ್ಮೆ ಟ್ರೈ ಮಾಡಿ ನೋಡಿ.

ಬೇಕಾದ ಸಾಮಗ್ರಿಗಳು

ಹುರಿದು ನುಣ್ಣಗೆ ಪುಡಿ ಮಾಡಿದ ಹುರುಳಿಹಿಟ್ಟು – ಒಂದು ಬಟ್ಟಲು
ಹುಣಸೆ ಹಣ್ಣಿನ ರಸ – ಅರ್ಧ ಬಟ್ಟಲು
ಹುರಿದ ಎಳ್ಳು – ಒಂದು ಚಿಕ್ಕ ಚಮಚ
ಹೆಚ್ಚಿದ ಈರುಳ್ಳಿ – 1
ಸಬ್ಬಸಿಗೆ ಸೊಪ್ಪು – ಅರ್ಧ ಕಟ್ಟು
ಕಾಯಿ ತುರಿ – ಎರಡು ಚಮಚ
ಸಾರಿನ ಪುಡಿ – ಎರಡು ಚಮಚ

ಹುರುಳಿ ಜುನುಕ ಮಾಡುವ ವಿಧಾನ

ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಬಿಸಿ ಆದಮೇಲೆ ಸಾಸಿವೆ ಒಗ್ಗರಣೆ ಹಾಕಿ. ನಂತರ ಎಳ್ಳು ಹಾಗೂ ಕಡಲೆ ಬೀಜ ಹಾಕಿ ಕೆಂಪಗೆ ಹುರಿಯಿರಿ. ಇದಾದ ಮೇಲೆ ಈರುಳ್ಳಿ ಹಾಕಿ ಬಾಡಿಸಿ. ಹೆಚ್ಚಿದ ಸಬ್ಬಸಿಗೆ ಸೊಪ್ಪು ಸೇರಿಸಿ ಇನ್ನಷ್ಟು ಫ್ರೈ ಮಾಡಿ. ಆಮೇಲೆ ಹುಣಸೆ ಹಣ್ಣು, ಸಾರಿನ ಪುಡಿ, ಬೇಕೆನಿಸಿದರೆ ಸ್ವಲ್ಪ ಅರಿಶಿನ, ಉಪ್ಪು ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಿ. ಕುದಿಯುತ್ತಿರುವ ನೀರಿಗೆ ತುರಿದ ಕಾಯಿ ಹಾಗೂ ಸ್ವಲ್ಪ ಸ್ವಲ್ಪವೇ ಹುರುಳಿ ಹಿಟ್ಟನ್ನು ಹಾಕಿ ಕೈ ಬಿಡದಂತೆ ಕದಡುತ್ತಾ ಇರಿ. ಮಿಶ್ರಣ ಗಟ್ಟಿ ಆಗುತ್ತಾ, ಗ್ರೇವಿ ರೂಪಕ್ಕೆ ಬಂದಾಗ ಕೆಳಗೆ ಇಳಿಸಿ. ಇದನ್ನು ಚಾಪತಿ ಅಥವಾ ರೊಟ್ಟಿಯ ಜೊತೆ ರುಚಿ ನೋಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read