ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಅತಿ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಅದು ಸ್ತನ ಕ್ಯಾನ್ಸರ್ (Breast Cancer). ಭಾರತದ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ವರದಿಯ ಪ್ರಕಾರ, ದೇಶದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 10 ರಷ್ಟು ಪಾಲು ಈ ಸ್ತನ ಕ್ಯಾನ್ಸರ್‌ನದ್ದೇ ಆಗಿದೆ.
ಆದರೆ ಗಾಬರಿ ಬೇಡ, ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಎಷ್ಟು ಮುಖ್ಯವೋ, ನಮ್ಮ ಆಹಾರ ಪದ್ಧತಿಯನ್ನು ಸರಿಯಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ನೀವು ಸೇವಿಸುವ ಆಹಾರವೇ ನಿಮ್ಮನ್ನು ಕ್ಯಾನ್ಸರ್‌ನಿಂದ ರಕ್ಷಿಸಬಲ್ಲ ದೊಡ್ಡ ಆಯುಧ.
ಸ್ತನ ಕ್ಯಾನ್ಸರ್ ತಡೆಗಟ್ಟಲು ಇವುಗಳನ್ನು ಇಂದೇ ನಿಮ್ಮ ಊಟದಲ್ಲಿ ಸೇರಿಸಿ:
1.ಬಣ್ಣ ಬಣ್ಣದ ತರಕಾರಿಗಳಿರಲಿ: ಕೇವಲ ಅನ್ನ-ಸಾಂಬಾರ್‌ಗೆ ಸೀಮಿತವಾಗಬೇಡಿ. ಬ್ರೊಕೋಲಿ, ಹೂಕೋಸು, ಪಾಲಕ್ ಮತ್ತು ಕ್ಯಾರೆಟ್‌ನಂತಹ ತರಕಾರಿಗಳಲ್ಲಿ ‘ಗ್ಲುಕೋಸಿನೋಲೇಟ್’ ಮತ್ತು ‘ಬೀಟಾ-ಕ್ಯಾರೋಟಿನ್’ ಇರುತ್ತದೆ. ಇವು ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡುವ ಪವರ್ ಹೊಂದಿವೆ.
2.ಒಮೆಗಾ-3 ಫ್ಯಾಟಿ ಆಸಿಡ್ ಪವರ್: ಮೀನು ತಿನ್ನುವವರಿಗೆ ಸಾಲ್ಮನ್ ಮತ್ತು ಬಂಗಡೆ ಮೀನುಗಳು ಉತ್ತಮ. ಸಸ್ಯಾಹಾರಿಗಳಾದರೆ ಅಗಸೆಬೀಜ (Flaxseeds), ಚಿಯಾ ಬೀಜಗಳು ಹಾಗೂ ವಾಲ್‌ನಟ್‌ಗಳನ್ನು ಸೇವಿಸಿ. ಇವು ದೇಹದಲ್ಲಿನ ಉರಿಯೂತವನ್ನು (Inflammation) ಕಡಿಮೆ ಮಾಡುತ್ತವೆ.
3.ನಾರುಯುಕ್ತ ಧಾನ್ಯಗಳು (Whole Grains): ಸಂಸ್ಕರಿಸಿದ ಹಿಟ್ಟಿಗಿಂತ (Maida) ಸಿರಿಧಾನ್ಯಗಳು ಮತ್ತು ನಾರಿನಂಶ ಹೆಚ್ಚಿರುವ ಆಹಾರಗಳನ್ನು ಬಳಸಿ. ಇದು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಿ ಕ್ಯಾನ್ಸರ್ ಅಪಾಯವನ್ನು ಕುಗ್ಗಿಸುತ್ತದೆ.
4.ಸೋಯಾ ಮತ್ತು ಬೇಳೆಕಾಳುಗಳು: ಬೀನ್ಸ್, ಮಸೂರ ಬೇಳೆ ಮತ್ತು ಟೋಫು ಅಥವಾ ಸೋಯಾ ಹಾಲಿನಂತಹ ಉತ್ಪನ್ನಗಳು ಸ್ತನದ ಆರೋಗ್ಯಕ್ಕೆ ಪೂರಕ. ಆದರೆ ಇದನ್ನು ಬಳಸುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
5.ಆಲಿವ್ ಎಣ್ಣೆಯ ಬಳಕೆ: ಅಡುಗೆಯಲ್ಲಿ ಸಂಸ್ಕರಿಸದ ಆಲಿವ್ ಎಣ್ಣೆ (Extra Virgin Olive Oil) ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಆ್ಯಂಟಿಆಕ್ಸಿಡೆಂಟ್‌ಗಳು ಸಿಗುತ್ತವೆ.
6.ಹಸಿರು ಸೊಪ್ಪು : ನಮ್ಮ ಹಳ್ಳಿಯ ಊಟದ ಸೊಗಡಿನಂತಿರುವ ನುಗ್ಗೆ ಸೊಪ್ಪು, ಮೆಂತ್ಯೆ ಸೊಪ್ಪು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಂಜೀವಿನಿಯಂತೆ ಕೆಲಸ ಮಾಡುತ್ತವೆ.
7.ಕ್ಯಾರೋಟಿನಾಯ್ಡ್ ಆ್ಯಂಟಿ-ಆಕ್ಸಿಡೆಂಟ್‌ಗಳು: ಈ ಹಸಿರು ಎಲೆ ತರಕಾರಿಗಳು ಬೀಟಾ ಕ್ಯಾರೋಟಿನ್, ಲುಟೀನ್ ಮತ್ತು ಜೆಕ್ಸಾಂಥೀನ್ ಸೇರಿದಂತೆ ಕ್ಯಾರೋಟಿನಾಯ್ಡ್ ಆ್ಯಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು, ಇವು ಆ್ಯಂಟಿ-ಬ್ರೀಸ್ಟ್ ಕ್ಯಾನ್ಸರ್ ಗುಣಗಳನ್ನು ಹೊಂದಿವೆ.
ಲಕ್ಷಣಗಳ ಮೇಲೆ ಕಣ್ಣಿರಲಿ:
ಆಹಾರದ ಜೊತೆಗೆ ನಿಮ್ಮ ದೇಹ ನೀಡುವ ಮುನ್ಸೂಚನೆಗಳ ಬಗ್ಗೆ ಗಮನವಿರಲಿ:
ಸ್ತನದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು.
ಗಾತ್ರ ಅಥವಾ ಆಕಾರದಲ್ಲಿ ದಿಢೀರ್ ಬದಲಾವಣೆ.
ಚರ್ಮದ ಬಣ್ಣ ಅಥವಾ ವಿನ್ಯಾಸದಲ್ಲಿ ವ್ಯತ್ಯಾಸ.

