ದೇಹವನ್ನು ಸದಾ ಕ್ರಿಯಾಶೀಲವಾಗಿಡಲು, ಉತ್ತಮ ಭಂಗಿ ಕಾಯ್ದುಕೊಳ್ಳಲು ಮತ್ತು ಸಮತೋಲನ ಸಾಧಿಸಲು ಕೆಳದೇಹ ಅಂದರೆ ತೊಡೆ ಹಾಗೂ ಕಾಲುಗಳ ಸ್ನಾಯುಗಳ ಬಲ ಬಹಳ ಮುಖ್ಯ. ನಡೆಯುವುದು, ಮೆಟ್ಟಿಲು ಹತ್ತುವುದು, ಕುರ್ಚಿಯಿಂದ ಏಳುವುದು ಹಾಗೂ ಸಾಮಗ್ರಿಗಳನ್ನು ಹೊರಬೇಕಾದರೆ ಬಲವಾದ ಕಾಲುಗಳು ಅತ್ಯಗತ್ಯ.
ಕಾಲು ಹಾಗೂ ಸೊಂಟದ ಭಾಗದ ಸ್ನಾಯುಗಳು ಬಲವಾಗಿದ್ದರೆ ವಯಸ್ಸಾದಂತೆ ಎಡವಿ ಬೀಳುವ ಮತ್ತು ಗಾಯಗೊಳ್ಳುವ ಅಪಾಯ ಕಡಿಮೆಯಾಗುತ್ತದೆ. ಜೊತೆಗೆ ಮಂಡಿ ನೋವು ಹಾಗೂ ಬೆನ್ನುನೋವಿನ ಸಮಸ್ಯೆಯೂ ಶಮನವಾಗುತ್ತದೆ. ದಿನನಿತ್ಯದ ಜೀವನದಲ್ಲಿ ಸುಲಭವಾಗಿ ಮಾಡಬಹುದಾದ 7 ಪ್ರಮುಖ ವ್ಯಾಯಾಮಗಳ ವಿವರ ಇಲ್ಲಿದೆ.
1. ಸ್ಕ್ವಾಟ್ಸ್ ದೇಹದ ಕೆಳಭಾಗದ ಶಕ್ತಿ ಹೆಚ್ಚಿಸಲು ಸ್ಕ್ವಾಟ್ಸ್ ಅತ್ಯುತ್ತಮ ವ್ಯಾಯಾಮ. ಇದು ತೊಡೆ, ಪೃಷ್ಠ ಮತ್ತು ಹೊಟ್ಟೆಯ ಭಾಗದ ಸ್ನಾಯುಗಳಿಗೆ ಉತ್ತಮ ತರಬೇತಿ ನೀಡುತ್ತದೆ. ಕಾಲುಗಳನ್ನು ಹೆಗಲ ಅಗಲಕ್ಕೆ ಇಟ್ಟು, ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಮಂಡಿ ಬಾಗಿಸಿ ಮತ್ತೆ ಮೊದಲಿನ ಸ್ಥಿತಿಗೆ ಬರಬೇಕು. ಇದನ್ನು ಪ್ರತಿದಿನ 10 ರಿಂದ 15 ಬಾರಿ ಮಾಡಬಹುದು.
2. ಲಂಜಸ್ ದೇಹದ ಸಮತೋಲನ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಲಂಜಸ್ ಸಹಕಾರಿ. ಒಂದು ಕಾಲನ್ನು ಮುಂದೆ ಇಟ್ಟು, ಎರಡೂ ಮಂಡಿಗಳು 90 ಡಿಗ್ರಿ ಕೋನದಲ್ಲಿ ಬಾಗುವಂತೆ ಕೆಳಗೆ ಹೋಗಿ ನಂತರ ಮೇಲಕ್ಕೆ ಬರಬೇಕು. ಪ್ರತಿ ಕಾಲಿಗೂ 10 ರಿಂದ 12 ಬಾರಿ ಈ ಅಭ್ಯಾಸ ಮಾಡಬಹುದು.
3. ಗ್ಲೂಟ್ ಬ್ರಿಡ್ಜ್ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರಿಗೆ ಈ ವ್ಯಾಯಾಮ ತುಂಬಾ ಉಪಯುಕ್ತ. ಇದು ಪೃಷ್ಠ ಹಾಗೂ ಬೆನ್ನಿನ ಕೆಳಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ. ನೆಲದ ಮೇಲೆ ಬೆನ್ನನ್ನು ಚಾಚಿ ಮಲಗಿ, ಮಂಡಿಗಳನ್ನು ಬಾಗಿಸಿ, ಪಾದಗಳನ್ನು ನೆಲಕ್ಕೆ ಆನಿಸಿ ಪೃಷ್ಠದ ಭಾಗವನ್ನು ಮೇಲಕ್ಕೆ ಎತ್ತಬೇಕು.
4. ಸ್ಟೆಪ್ ಅಪ್ಸ್ ಮೆಟ್ಟಿಲು ಹತ್ತುವ ಭಂಗಿಯನ್ನು ಹೋಲುವ ಈ ವ್ಯಾಯಾಮ ಕಾಲುಗಳ ಶಕ್ತಿ ಮತ್ತು ದೇಹದ ಸಮತೋಲನವನ್ನು ಹೆಚ್ಚಿಸುತ್ತದೆ. ಯಾವುದೇ ಎತ್ತರದ ಮಣೆ ಅಥವಾ ಸ್ಟೆಪ್ ಬಳಸಿ ಒಂದು ಕಾಲನ್ನಿಟ್ಟು ಮೇಲಕ್ಕೆ ಹತ್ತಿ ಇಳಿಯುವ ಮೂಲಕ ಇದನ್ನು ಅಭ್ಯಾಸ ಮಾಡಬಹುದು.
5. ರೊಮೇನಿಯನ್ ಡೆಡ್‌ಲಿಫ್ಟ್ ತೊಡೆಯ ಹಿಂಭಾಗ ಮತ್ತು ಸೊಂಟದ ಭಾಗದ ಚಲನಶೀಲತೆಯನ್ನು ಹೆಚ್ಚಿಸಲು ಇದು ಸೂಕ್ತ. ಕೈಯಲ್ಲಿ ಸಣ್ಣ ಡಂಬಲ್ ಹಿಡಿದುಕೊಂಡು, ಬೆನ್ನನ್ನು ನೆಟ್ಟಗಿಟ್ಟು ಸೊಂಟದಿಂದ ಮುಂಭಾಗಕ್ಕೆ ಬಾಗುವ ಮೂಲಕ ಈ ವ್ಯಾಯಾಮ ಮಾಡಲಾಗುತ್ತದೆ.
6. ಕಾಫ್ ರೈಸಸ್ ಹಿಮ್ಮಡಿ ಹಾಗೂ ಪಿಂಡರಿ ಸ್ನಾಯುಗಳ ಶಕ್ತಿಗೆ ಕಾಫ್ ರೈಸಸ್ ಉತ್ತಮ. ಪಾದದ ಮುಂಭಾಗದ ಮೇಲೆ ನಿಂತು ಹಿಮ್ಮಡಿಯನ್ನು ಮೇಲಕ್ಕೆ ಎತ್ತಿ ಮತ್ತೆ ಕೆಳಗೆ ಇಳಿಸಬೇಕು. ಇದನ್ನು 15 ರಿಂದ 20 ಬಾರಿ ಅಭ್ಯಾಸ ಮಾಡುವುದರಿಂದ ನಡಿಗೆಯಲ್ಲಿ ಸ್ಥಿರತೆ ಸಿಗುತ್ತದೆ.
7. ವಾಲ್ ಸಿಟ್ಸ್ ಗೋಡೆಗೆ ಬೆನ್ನು ಆನಿಸಿ, ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಇರುವುದನ್ನು ವಾಲ್ ಸಿಟ್ ಎನ್ನಲಾಗುತ್ತದೆ. ಈ ಸ್ಥಿತಿಯಲ್ಲಿ 20 ರಿಂದ 60 ಸೆಕೆಂಡುಗಳ ಕಾಲ ನಿಲ್ಲುವುದರಿಂದ ತೊಡೆ ಮತ್ತು ಪೃಷ್ಠದ ಸ್ನಾಯುಗಳ ತಾಳ್ಮೆ ಹಾಗೂ ಶಕ್ತಿ ಹೆಚ್ಚುತ್ತದೆ.

