ವರ್ಷಕ್ಕೆ ಸುಮಾರು 15 ರಿಂದ 16 ಲಕ್ಷ ರೂಪಾಯಿ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಯೊಬ್ಬರು, ತಮ್ಮ ಇಡೀ 35 ವರ್ಷಗಳ ಸೇವೆಯಲ್ಲಿ ಖರ್ಚು-ವೆಚ್ಚಗಳನ್ನು ಕಳೆದು ಗರಿಷ್ಠ 5 ರಿಂದ 6 ಕೋಟಿ ರೂಪಾಯಿ ಉಳಿಸಬಹುದು. ಆದರೆ, ಆಂಧ್ರಪ್ರದೇಶದ ನಿವೃತ್ತ ಇಂಜಿನಿಯರ್ ಒಬ್ಬರ ಮನೆಯ ಮೇಲೆ ನಡೆದ ಎಸಿಬಿ (ACB) ದಾಳಿಯಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಏನಿದು ಘಟನೆ ?
ಆಂಧ್ರಪ್ರದೇಶದ ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್ ಇಂಜಿನಿಯರ್ ಕಲ್ಲೇಪಲ್ಲಿ ಶ್ರೀನಿವಾಸ ರಾವ್ (Kallepalli Srinivasa Rao) ಅವರ ಮನೆ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಭ್ರಷ್ಟಾಚಾರ ನಿರೋಧಕ ದಳ (ACB) ಏಕಕಾಲದಲ್ಲಿ ದಾಳಿ ನಡೆಸಿದೆ. ವಿಶಾಖಪಟ್ಟಣಂ, ಸಾಲೂರು ಮತ್ತು ಹೈದರಾಬಾದ್ನಲ್ಲಿ ನಡೆದ ಈ ದಾಳಿಯಲ್ಲಿ ಅಧಿಕಾರಿಗಳೇ ಬೆಚ್ಚಿಬೀಳುವಂತಹ ಸಂಪತ್ತು ಪತ್ತೆಯಾಗಿದೆ.
ಸಿಕ್ಕಿರುವ ಅಕ್ರಮ ಆಸ್ತಿಯ ಪಟ್ಟಿ
ದಾಳಿಯ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಸ್ವತ್ತುಗಳ ವಿವರ ಹೀಗಿದೆ:
• ನಗದು: ಮನೆಯಲ್ಲಿ ಬರೋಬ್ಬರಿ ₹61.87 ಲಕ್ಷ ನಗದು ಪತ್ತೆಯಾಗಿದೆ.
• ಬಂಗಾರ ಮತ್ತು ಬೆಳ್ಳಿ: ಸುಮಾರು 2.5 ಕೆಜಿ ಚಿನ್ನ ಮತ್ತು 20.3 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
• ಸ್ಥಿರ ಆಸ್ತಿ: 3 ಮನೆ ನಿವೇಶನಗಳು (House Plots) ಮತ್ತು 2 ಅಪಾರ್ಟ್ಮೆಂಟ್ ಫ್ಲಾಟ್ಗಳ ದಾಖಲೆಗಳು ಪತ್ತೆಯಾಗಿವೆ.
• ಕೃಷಿ ಭೂಮಿ: ಸಾಲೂರು ಪಟ್ಟಣದಲ್ಲಿ ಮಗಳ ಹೆಸರಿನಲ್ಲಿರುವ 18.57 ಸೆಂಟ್ಸ್ ಕೃಷಿ ಭೂಮಿಯ ದಾಖಲೆಗಳು ಸಿಕ್ಕಿವೆ.
• ಬ್ಯಾಂಕ್ ಲಾಕರ್: ಇನ್ನೂ 5 ಬ್ಯಾಂಕ್ ಲಾಕರ್ಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ತೆರೆದ ನಂತರ ಮತ್ತಷ್ಟು ಆಸ್ತಿ ಪತ್ತೆಯಾಗುವ ಸಾಧ್ಯತೆಯಿದೆ.
ಶ್ರೀನಿವಾಸ ರಾವ್ ಅವರು 1990ರಲ್ಲಿ ಇಲಾಖೆಗೆ ಸೇರಿದ್ದರು. ವಿಶೇಷವೆಂದರೆ, ಇವರು ಕಳೆದ ಡಿಸೆಂಬರ್ 31, 2025ರಂದು ವಿಶಾಖಪಟ್ಟಣಂನಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಆಗಿ ನಿವೃತ್ತರಾಗಿದ್ದರು. ನಿವೃತ್ತಿಯಾದ ಕೆಲವೇ ದಿನಗಳಲ್ಲಿ ಇವರ ಅಕ್ರಮ ಆಸ್ತಿಯ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳು ಈಗಾಗಲೇ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀನಿವಾಸ ರಾವ್ ಅವರನ್ನು ಶೀಘ್ರದಲ್ಲೇ ಬಂಧಿಸಿ ವಿಶಾಖಪಟ್ಟಣಂನ ಎಸಿಬಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಉಳಿದ 5 ಬ್ಯಾಂಕ್ ಲಾಕರ್ಗಳನ್ನು ತೆರೆದಾಗ ಈ ಅಕ್ರಮ ಆಸ್ತಿಯ ಮೊತ್ತ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

