ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಯಾವ ರಾಜ್ಯದಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸಿದ್ದು, ಅಧಿಕಾರದತ್ತ ದಾಪುಗಾಲಿಟ್ಟಿದೆ ಎಂಬುದು ಬಹುತೇಕ ನಿಚ್ಚಳವಾಗುತ್ತಿದೆ. ಐದು ರಾಜ್ಯಗಳಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಭಾರಿ ಹಿನ್ನಡೆಯಾಗಿದ್ದು, ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಪಂಚ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಸಂಜೆ ವೇಳೆಗೆ ಬಹುತೇಕ ಫಲಿತಾಂಶ ಲಭ್ಯವಾಗಲಿದೆ. ಸದ್ಯದ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳದಲ್ಲಿ ಆಡಳಿತಾರೂಢ ಪಕ್ಷಗಳಿಗೆ ಹಿನ್ನಡೆಯಾಗಿದ್ದು ಸ್ವತಃ ತಮ್ಮದೇ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ. ಈ ಮೂಲಕ ಮೂರು ರಾಜ್ಯದ ಮುಖ್ಯಮಂತ್ರಿಗಳಿಗೆ ಮುಖಭಂಗ ಎದುರಾಗಿದೆ.
ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನಡೆಯಾಗಿದೆ, ತಮಿಳುನಾಡಿನ ಕೊಲತ್ತೂರ್ ಕ್ಷೇತ್ರದಲ್ಲಿ ಎಂಕೆ ಸ್ಟಾಲಿನ್ ಹಿನ್ನಡೆಯಲ್ಲಿದ್ದಾರೆ. ಕೇರಳದಲ್ಲಿ, ಧರ್ಮಡಂನಲ್ಲಿ ಪಿಣರಾಯಿ ವಿಜಯನ್ಗೆ ಹಿನ್ನಡೆಯಾಗಿದೆ.
ಇನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಲುಕ್ಬರಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಕೂಡ ತಮ್ಮ ಥಟ್ಟಂಚವಾಡಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿದ್ದು, ಈ ಬಾರಿ ಬಂಗಾಳದಲ್ಲಿ ಬಿಜೆಪಿ ಅಧ್ಕಾರಕ್ಕೆ ಏರಿವುದು ಖಚಿತವಾಗಿದೆ. ಬಿಜೆಪಿ 191 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಟಿಎಂಸಿ 97 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ತಮಿಳುನಾಡಿನಲ್ಲಿ ಡಿಎಂಕೆ 65 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ ನೂತನ ಪಕ್ಷ ವಿಜಯ್ ಅವರ ಟಿವಿಕೆ 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕೇರಳಂ ನಲ್ಲಿ ಕಾಂಗ್ರೆಸ್ ಮೈತ್ರಿಕೂಡ ಯುಡಿಎಫ್ 103 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಎಲ್ ಡಿಎಫ್ ಕೇವಲ ೩೫ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

