ಬೆಂಗಳೂರು: ಇನ್ಫೋಸಿಸ್ ಮಾರಾಟ ಮಾಡಿದ್ದ ಜಮೀನು ನೋಂದಣಿ ಮಾಡಿಕೊಟ್ಟ ಸಬ್ ರಿಜಿಸ್ಟ್ರಾರ್ ಸೇರಿದಂತೆ ಐದು ಮಂದಿ ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಕಾವೇರಿ 2.0 ತಂತ್ರಾಂಶದಲ್ಲಿ ನೀಡಲಾಗಿರುವ ಕೆಲವು ವಿನಾಯಿತಿಗಳನ್ನು ದುರುಪಯೋಗ ಮಾಡಿಕೊಂಡು ಕ್ರಯ ಪತ್ರಗಳನ್ನು ಅಕ್ರಮವಾಗಿ ನೋಂದಣಿ ಮಾಡಿರುವುದು ಬೆಳಕಿಗೆ ಬಂದಿದೆ. ಕಾವೇರಿ 2.0 ತಂತ್ರಾಂಶದಲ್ಲಿರುವ ನ್ಯಾಯಾಲಯ ಆದೇಶ ಆಧಾರಿತ ನೋಂದಣಿ ವ್ಯವಸ್ಥೆಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡು ಆಸ್ತಿಗಳ ಅಕ್ರಮ ನೋಂದಣಿ ಮಾಡಿರುವುದು ಬಹಿರಂಗವಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಜಾಪುರದ ಉಪ ನೋಂದಣಾಧಿಕಾರಿ ರವಿ ಸಂಕನಗೌಡ ಸೇರಿದಂತೆ ಐದು ಮಂದಿ ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇ-ಸ್ವತ್ತಿನಲ್ಲಿ ಆಸ್ತಿಗಳ ದಾಖಲೆ ಲಭ್ಯವಿಲ್ಲದಿದ್ದರೂ ನ್ಯಾಯಾಲಯದ ಆದೇಶದ ಸುಳ್ಳು ಕಾರಣ ನೀಡಿ ಹಲವು ಶುದ್ದ ಕ್ರಯ ಪತ್ರಗಳನ್ನು ವಂಚನಾತ್ಮಕವಾಗಿ ನೋಂದಣಿ ಮಾಡಲಾಗಿದೆ.
ಸರ್ಜಾಪುರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಇನ್ಫೋಸಿಸ್ ಗೆ ಸೇರಿದ 250 ಕೋಟಿ ರೂಪಾಯಿ ಮೌಲ್ಯದ 53.5 ಎಕರೆ ಜಾಗವನ್ನು 40 ಸೇಲ್ ಡೀಡ್ ಗಳ ಮೂಲಕ ಬ್ಲೂ ಹೋಮ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಸಬ್ ರಿಜಿಸ್ಟ್ರಾರ್ ರವಿಶಂಕನಗೌಡ ನೋಂದಣಿ ಮಾಡಿ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಮುಲ್ಲೈ ಮುಹಿಲನ್ ಅವರು ಅಮಾನತು ಮಾಡಿದ್ದಾರೆ.
ಕ್ರಯ ಪತ್ರಗಳನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಸ್ವತ್ತಿಗೆ ಸಂಬಂಧಿಸಿದ ಇ-ಖಾತಾ ಮಾಹಿತಿಯನ್ನು ಇ-ಸ್ವತ್ತು ಪೋರ್ಟಲ್ ನಿಂದ ಕಾವೇರಿ 2.0 ತಂತ್ರಾಂಶಕ್ಕೆ ವರ್ಗಾಯಿಸಬೇಕು. ಈ ನಿಯಮವನ್ನು ಉಲ್ಲಂಘಿಸಿ ಬಾಣಸವಾಡಿ, ವರ್ತೂರು, ಹಲಸೂರು ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನೋಂದಣಿ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಐವರು ಉಪ ನೋಂದಣಾಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದು, ಇವರಲ್ಲಿ ಒಬ್ಬರು ನಿವೃತ್ತರಾಗಿದ್ದಾರೆ. ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಎನ್. ಸತೀಶ್ ಕುಮಾರ್, ಆರ್. ಪ್ರಭಾವತಿಮ ಶ್ರೀಧರ್, ಗಿರೀಶ್ ಚಂದ್ರ ಅವರನ್ನು ಅಮಾನತು ಮಾಡಲಾಗಿದೆ.

