ಏಷ್ಯಾದ ರಾಷ್ಟ್ರಗಳಲ್ಲಿ ತಲೆಮಾರುಗಳಿಂದ ಸೌಂದರ್ಯವರ್ಧಕವಾಗಿ ಬಳಕೆಯಾಗುತ್ತಿರುವ ಅಕ್ಕಿ ತೊಳೆದ ನೀರು ಅಥವಾ ಗಂಜಿ ಕೇವಲ ಬಾಹ್ಯ ಸೌಂದರ್ಯಕ್ಕೆ ಮಾತ್ರವಲ್ಲ, ಸೇವನೆ ಮಾಡುವುದರಿಂದಲೂ ಚರ್ಮದ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳನ್ನು ನೀಡುತ್ತದೆ. ಅಕ್ಕಿಯನ್ನು ನೆನೆಸಿದಾಗ ಅಥವಾ ಕುದಿಸಿದಾಗ ಸಿಗುವ ಈ ಬಿಳಿ ಮಿಶ್ರಿತ ದ್ರವದಲ್ಲಿ ವಿಟಮಿನ್, ಅಮೈನೋ ಆಮ್ಲ ಹಾಗೂ ಆಂಟಿಆಕ್ಸಿಡೆಂಟ್ ಹೇರಳವಾಗಿರುತ್ತವೆ. ಇತ್ತೀಚಿನ ಸಂಶೋಧನೆಗಳು ಕೂಡ ಅಕ್ಕಿ ನೀರು ಚರ್ಮದ ಕಾಂತಿಯನ್ನು ಹೆಚ್ಚಿಸಲು ಮತ್ತು ಆರೋಗ್ಯವನ್ನು ಕಾಪಾಡಲು ಪೂರಕ ಎಂದು ಸಾಬೀತುಪಡಿಸಿವೆ.
ಅಕ್ಕಿ ನೀರು ಕುಡಿಯುವುದರಿಂದ ಚರ್ಮಕ್ಕೆ ಸಿಗುವ ಪ್ರಮುಖ 5 ಪ್ರಯೋಜನಗಳು ಇಲ್ಲಿವೆ:
1. ಚರ್ಮದ ತೇವಾಂಶ ಕಾಪಾಡುತ್ತದೆ ಅಕ್ಕಿ ನೀರಿನಲ್ಲಿರುವ ನೈಸರ್ಗಿಕ ಸ್ಟಾರ್ಚ್ ಮತ್ತು ಸೆರಾಮೈಡ್ ಅಂಶಗಳು ಚರ್ಮದ ರಕ್ಷಣಾ ಕವಚವನ್ನು ಬಲಪಡಿಸುತ್ತವೆ. ಇದು ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವುದಲ್ಲದೆ, ಚರ್ಮದ ಸ್ಥಿತಿಸ್ಥಾಪಕತ್ವವನ್ನು (Elasticity) ಹೆಚ್ಚಿಸುತ್ತದೆ. ಇದರಿಂದ ಚರ್ಮವು ಮಾಲಿನ್ಯ ಮತ್ತು ಒಣ ಹವೆಯಿಂದ ರಕ್ಷಣೆ ಪಡೆಯುತ್ತದೆ.
2. ವಯಸ್ಸಾದ ಲಕ್ಷಣಗಳನ್ನು ತಡೆಯುತ್ತದೆ ಇದರಲ್ಲಿರುವ ಫೆರುಲಿಕ್ ಆಸಿಡ್ ಮತ್ತು ಗಾಮ-ಒರಿಜಾನೋಲ್ ಎಂಬ ಆಂಟಿಆಕ್ಸಿಡೆಂಟ್ಗಳು ವಯಸ್ಸಾದಂತೆ ಚರ್ಮದ ಮೇಲಾಗುವ ನೆರಿಗೆಗಳನ್ನು ಕಡಿಮೆ ಮಾಡುತ್ತವೆ. ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸುವ ಮೂಲಕ ಚರ್ಮದ ಕೋಶಗಳು ಹಾನಿಯಾಗದಂತೆ ಇದು ತಡೆಯುತ್ತದೆ.
3. ಕಾಂತಿಯುತ ಚರ್ಮಕ್ಕೆ ಸಹಕಾರಿ ಚರ್ಮದ ಮೇಲೆ ಕಪ್ಪು ಕಲೆಗಳು ಉಂಟಾಗಲು ಮೆಲನಿನ್ ಉತ್ಪಾದನೆ ಹೆಚ್ಚಾಗುವುದು ಕಾರಣ. ಅಕ್ಕಿ ನೀರಿನ ಸೇವನೆಯು ಮೆಲನಿನ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ, ಇದರಿಂದ ಮುಖದ ಮೇಲೆ ಸಮನಾದ ಕಾಂತಿ ಕಂಡುಬರುತ್ತದೆ ಮತ್ತು ಚರ್ಮದ ಬಣ್ಣ ಸುಧಾರಿಸುತ್ತದೆ.
4. ಉರಿಯೂತ ಮತ್ತು ಮೊಡವೆ ನಿವಾರಣೆ ಅಕ್ಕಿ ನೀರಿನಲ್ಲಿರುವ ಅಲಾಂಟೊಯಿನ್ ಎಂಬ ಅಂಶವು ಚರ್ಮದ ಕಿರಿಕಿರಿ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಮೊಡವೆ ಅಥವಾ ಚರ್ಮದ ಕೆಂಪಾಗುವಿಕೆಯಿಂದ ಬಳಲುವವರಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.
5. ಕಾಲಜನ್ ಉತ್ಪಾದನೆಗೆ ಉತ್ತೇಜನ ಚರ್ಮದ ಬಿಗಿತವನ್ನು ಕಾಯ್ದುಕೊಳ್ಳಲು ಕಾಲಜನ್ ಅತ್ಯಗತ್ಯ. ಅಕ್ಕಿ ನೀರಿನಲ್ಲಿರುವ ಅಂಶಗಳು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ಚರ್ಮವು ಬೇಗನೆ ಸಡಿಲವಾಗದಂತೆ ನೋಡಿಕೊಳ್ಳುತ್ತವೆ. ಇದು ಚರ್ಮದ ರಿಪೇರಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಯಾರು ಈ ನೀರನ್ನು ಕುಡಿಯಬಾರದು? ಅಕ್ಕಿ ನೀರು ಆರೋಗ್ಯಕರವಾಗಿದ್ದರೂ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ. ಗರ್ಭಿಣಿಯರು, ಸಣ್ಣ ಮಕ್ಕಳು ಮತ್ತು ಮಧುಮೇಹಿಗಳು ಇದನ್ನು ಕುಡಿಯುವುದನ್ನು ತಪ್ಪಿಸುವುದು ಒಳ್ಳೆಯದು. ಏಕೆಂದರೆ ಇದರಲ್ಲಿನ ಸ್ಟಾರ್ಚ್ ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಾಗೆಯೇ ಅಕ್ಕಿಯಲ್ಲಿ ಅಲ್ಪ ಪ್ರಮಾಣದ ಆರ್ಸೆನಿಕ್ ಇರುವ ಸಾಧ್ಯತೆ ಇರುವುದರಿಂದ, ಅತಿಯಾದ ಸೇವನೆ ಬೇಡ.

