ಸಿಬಿಎಸ್‌ಇ (CBSE) 12ನೇ ತರಗತಿಯ ಫಲಿತಾಂಶದ ನಂತರ ಉಂಟಾದ ವಿವಾದಗಳ ನಡುವೆಯೇ, ಇಂದು ಮರುಮೌಲ್ಯಮಾಪನ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಈ ವರ್ಷದ ಮೌಲ್ಯಮಾಪನದಲ್ಲಿ ಜಾರಿಗೆ ತಂದ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ಪದ್ಧತಿಯು ಸಾಕಷ್ಟು ಗೊಂದಲ ಮತ್ತು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈವರೆಗೆ ಸುಮಾರು 4 ಲಕ್ಷ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದು, ಒಟ್ಟು 11.31 ಲಕ್ಷ ಉತ್ತರ ಪುಸ್ತಕಗಳಿಗೆ ಬೇಡಿಕೆ ಬಂದಿದೆ. ಈಗಾಗಲೇ 8.98 ಲಕ್ಷ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ.
ಏನಿದು ವಿವಾದ? : ಭೌತಿಕ ಉತ್ತರ ಪತ್ರಿಕೆಗಳ ಬದಲು ಸ್ಕ್ಯಾನ್ ಮಾಡಿದ ಡಿಜಿಟಲ್ ಪ್ರತಿಗಳನ್ನು ಮೌಲ್ಯಮಾಪನ ಮಾಡುವುದೇ ಈ OSM ಪದ್ಧತಿ. ಆದರೆ, ಇದರಲ್ಲಿ ಅಂಕಗಳ ವ್ಯತ್ಯಾಸ, ಅರ್ಧಕ್ಕೆ ನಿಂತ ಮೌಲ್ಯಮಾಪನ ಮತ್ತು ವೆಬ್‌ಸೈಟ್ ತಾಂತ್ರಿಕ ದೋಷಗಳಿಂದ ವಿದ್ಯಾರ್ಥಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ.ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದ ಸಿಬಿಎಸ್‌ಇ, ಈ ಹಿಂದೆ ಇದ್ದ ದುಬಾರಿ ಶುಲ್ಕವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಈಗ ಉತ್ತರ ಪತ್ರಿಕೆಯ ಪ್ರತಿ ಮತ್ತು ಅಂಕಗಳ ಪರಿಶೀಲನೆಗೆ ತಲಾ 100 ರೂಪಾಯಿ ನಿಗದಿಪಡಿಸಲಾಗಿದೆ. ಮರುಮೌಲ್ಯಮಾಪನದಲ್ಲಿ ಅಂಕಗಳು ಹೆಚ್ಚಾದರೆ ಶುಲ್ಕವನ್ನು ಹಿಂದಿರುಗಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಅರ್ಜಿ ಸಲ್ಲಿಸುವ ವಿಧಾನ: ವಿದ್ಯಾರ್ಥಿಗಳು ಮೊದಲು ತಮ್ಮ ಉತ್ತರ ಪತ್ರಿಕೆಯನ್ನು ಪಡೆದು, ಅದರಲ್ಲಿನ ತಪ್ಪುಗಳನ್ನು ಗಮನಿಸಬೇಕು. ನಂತರ ಅಂಕಗಳ ಪರಿಶೀಲನೆಗೆ ಅಥವಾ ಮರುಮೌಲ್ಯಮಾಪನಕ್ಕೆ ಸಿಬಿಎಸ್‌ಇ ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಮರುಮೌಲ್ಯಮಾಪನದ ನಂತರ ಅಂಕಗಳು ಹೆಚ್ಚಾಗಬಹುದು, ಕಡಿಮೆಯಾಗಬಹುದು ಅಥವಾ ಬದಲಾಗದೇ ಇರಬಹುದು. ಅಂತಿಮವಾಗಿ ಬರುವ ಅಂಕಗಳೇ ಅಂತಿಮ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಕೇವಲ ಅಂಕಗಳಲ್ಲದೆ, ಸಿಬಿಎಸ್‌ಇ ವ್ಯವಸ್ಥೆಯ ಮೇಲೆ ವಿದ್ಯಾರ್ಥಿಗಳು ಮತ್ತು ಪೋಷಕರು ಇಟ್ಟಿರುವ ನಂಬಿಕೆ ಈ ವಿವಾದದಿಂದಾಗಿ ಪರೀಕ್ಷೆಗೀಡಾಗಿದೆ. ಈ ಮರುಮೌಲ್ಯಮಾಪನ ಪ್ರಕ್ರಿಯೆಯು ವಿದ್ಯಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

