ಮುಂಡಗೋಡ: ಮಾ.18 ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಸಂಭ್ರಮದಿಂದ ಪರೀಕ್ಷಾ ಕೇಂದ್ರದತ್ತ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿಯ ಪ್ರೌಢಶಾಲೆಯ 23 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಹಾಲ್ ಟಿಕೆಟ್ ಸಿಗದ ಕಾರಣ ಈ ವಿದ್ಯಾರ್ಥಿಗಳ ಭವಿಷ್ಯ ಈಗ ಆತಂಕಕ್ಕೆ ಸಿಲುಕಿದೆ.
ಏನಿದು ಘಟನೆ?
ಮುಂಡಗೋಡ ತಾಲೂಕಿನ ಚಿಗಳ್ಳಿ ಪ್ರೌಢಶಾಲೆಯಲ್ಲಿ ಈ ಬಾರಿ ಒಟ್ಟು 105 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆದರೆ, ಈ ಪೈಕಿ 14 ಬಾಲಕರು ಹಾಗೂ 9 ಬಾಲಕಿಯರು ಸೇರಿದಂತೆ ಒಟ್ಟು23 ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯು ಹಾಲ್ ಟಿಕೆಟ್ ನೀಡಿಲ್ಲ. ಇದರಿಂದಾಗಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗಲಾಗದೆ ಕಣ್ಣೀರಿಡುತ್ತಿದ್ದಾರೆ.
ಕಾರಣವೇನು ?
ಶಿಕ್ಷಣ ಇಲಾಖೆಯ ನಿಯಮದಂತೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 75 ರಷ್ಟು ಹಾಜರಾತಿ ಕಡ್ಡಾಯವಾಗಿದೆ. ಆದರೆ, ಈ 23 ವಿದ್ಯಾರ್ಥಿಗಳು ಅಗತ್ಯವಿರುವಷ್ಟು ಹಾಜರಾತಿ ಹೊಂದಿಲ್ಲ ಎಂಬ ತಾಂತ್ರಿಕ ಕಾರಣವನ್ನು ನೀಡಿ ಶಿಕ್ಷಣ ಇಲಾಖೆ ಹಾಗೂ ಶಾಲಾ ಮಂಡಳಿಯು ಇವರಿಗೆ ಪ್ರವೇಶ ಪತ್ರವನ್ನು ವಿತರಿಸಿಲ್ಲ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳ ಮತ್ತು ಪೋಷಕರ ಆಕ್ರೋಶ
“ವರ್ಷವಿಡೀ ಓದಿದ್ದೇವೆ, ಈಗ ಕೊನೆಯ ಕ್ಷಣದಲ್ಲಿ ಹಾಜರಾತಿ ಕಡಿಮೆ ಇದೆ ಎಂದು ಹೇಳಿ ಹಾಲ್ ಟಿಕೆಟ್ ನೀಡದೆ ನಮ್ಮ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ” ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಇತ್ತ ಪೋಷಕರು ಕೂಡ ಶಾಲಾ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲೇ ಈ ಬಗ್ಗೆ ಎಚ್ಚರಿಕೆ ನೀಡಬೇಕಿತ್ತು ಎಂದು ಆಕ್ಷೇಪಿಸಿದ್ದಾರೆ.
ಗಮನಿಸಿ : ನಿಯಮದ ಪ್ರಕಾರ ಹಾಜರಾತಿ ಕಡ್ಡಾಯವಾಗಿದ್ದರೂ, ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿದಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ.

