ಥೈಲ್ಯಾಂಡ್‌ನ ಈಶಾನ್ಯದಲ್ಲಿ ಕ್ರೇನ್ ರೈಲಿನ ಮೇಲೆ ಬಿದ್ದು ಹಳಿತಪ್ಪಿದ ಪರಿಣಾಮ ಕನಿಷ್ಠ 22 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಥೈಲ್ಯಾಂಡ್ನಲ್ಲಿ ನಿರ್ಮಾಣ ಹಂತದ ಕಾಮಗಾರಿ ನಡೆಯುವ ವೇಳೆ ಕ್ರೇನ್ ಕುಸಿದು ರೈಲಿನ ಮೇಲೆ ಬಿದ್ದ ಪರಿಣಾಮ ಕನಿಷ್ಠ22 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನಿಂದ ದೇಶದ ಈಶಾನ್ಯ ಪ್ರದೇಶಕ್ಕೆ ಪ್ರಯಾಣಿಸುತ್ತಿತ್ತು. ಬ್ಯಾಂಕಾಕ್ನಿಂದ ಈಶಾನ್ಯಕ್ಕೆ 230 ಕಿ.ಮೀ ದೂರದಲ್ಲಿರುವ ನಖೋನ್ ರಾಟ್ಚಸಿಮಾ ಪ್ರಾಂತ್ಯದ ಸಿಖಿಯೊ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ. ರೈಲು ಉಬೊನ್ ರಾಟ್ಚಥಾನಿ ಪ್ರಾಂತ್ಯಕ್ಕೆ ತೆರಳುತ್ತಿತ್ತು. ಸ್ಥಳೀಯ ಪೊಲೀಸರು ಹೇಳುವಂತೆ ಕ್ರೇನ್ ಹೈಸ್ಪೀಡ್ ರೈಲು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅದು ಕುಸಿದು ಹಾದುಹೋಗುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ವ್ಯಾಗನ್ ಹಳಿತಪ್ಪಿ ಬೆಂಕಿ ಹೊತ್ತಿಕೊಂಡಿತು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

