ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯ್ದೆ 1966 ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಶುಕ್ರವಾರ ನೂತನ ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೊದಲ ನಿಯಮಗಳು(ಎರಡನೇ ತಿದ್ದುಪಡಿ) 2026 ಎಂದು ಕರೆಯಲಾಗಿದ್ದು, ಇವು 2025 -26 ನೇ ಸಾಲಿನ ಪರೀಕ್ಷೆಯಿಂದಲೇ ಜಾರಿಗೆ ಬರಲಿವೆ.
ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮತ್ತು ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ವಿಷಯಗಳು ಅಂಕಗಳನ್ನು ಕೇವಲ ಗ್ರೇಡ್ ರೂಪದಲ್ಲಿ ನೀಡಲಾಗುವುದು. ಈ ವಿಷಯಗಳನ್ನು ಅಂಕಪಟ್ಟಿಯಲ್ಲಿ ಹೆಚ್ಚುವರಿ ವಿಷಯಗಳೆಂದು ಪರಿಗಣಿಸಲಾಗುತ್ತದೆಯೇ ಹೊರತೂ ವಿದ್ಯಾರ್ಥಿಯ ಉತ್ತೀರ್ಣ ಅಥವಾ ಅನುತ್ತೀರ್ಣತೆ ನಿರ್ಧರಿಸಲು ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ.
ಗ್ರೇಡಿಂಗ್ ವ್ಯವಸ್ಥೆ ಬಗ್ಗೆ ಅಧಿಸೂಚನೆಯಲ್ಲಿ ಸ್ಪಷ್ಟನೆ ನೀಡಲಾಗಿದ್ದು, ತೃತೀಯ ಭಾಷೆ ಅಥವಾ ಎನ್.ಎಸ್.ಕ್ಯೂ.ಎಫ್. ವಿಷಯಗಳು ಶೇಕಡ 80 ರಿಂದ ಶೇಕಡ 100 ಅಂಕ ಗಳಿಸಿದರೆ ಎ ಗ್ರೇಡ್, ಶೇಕಡ 50 ರಿಂದ 79 ಅಂಕಗಳಿಗೆ ಬಿ ಗ್ರೇಡ್ ಮತ್ತು ಶೇಕಡ 49 ರವರೆಗೆ ಅಂಕ ಗಳಿಸಿದರೆ ಸಿ ಗ್ರೇಡ್ ನೀಡಲಾಗುವುದು.
ಉತ್ತೀರ್ಣರಾಗಲು ಬೇಕಾದ ಅಂಕಗಳ ಬಗ್ಗೆ ಹೊಸ ಮಾನದಂಡ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಒಟ್ಟು 525 ಅಂಕಗಳಲ್ಲಿ ಕನಿಷ್ಠ 173 ಅಂಕ ಗಳಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ ಪ್ರತಿ ವಿಷಯದಲ್ಲಿ ಕನಿಷ್ಠ ಶೇಕಡ 30 ಅಂಕ ಗಳಿಸಿರಬೇಕು. ಆಂತರಿಕ ಮತ್ತು ಬಾಹ್ಯ ಪರೀಕ್ಷೆಗಳನ್ನು ಸೇರಿಸಿ ಒಟ್ಟಾರೆಯಾಗಿ ಶೇಕಡ 33 ರಷ್ಟು ಅಂಕ ಪಡೆದವರನ್ನು ಮಾತ್ರ ಉತ್ತೀರ್ಣರೆಂದು ಘೋಷಿಸಲಾಗುವುದು.
ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲಹೆಗಳಿದ್ದಲ್ಲಿ ಏಳು ದಿನದೊಳಗೆ ಸಲ್ಲಿಸಬಹುದು. ತಮ್ಮ ಸಲಹೆ ಆಕ್ಷೇಪಣೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಬಹುದು.

