ನಾವೆಲ್ಲರೂ ಜೀವನದ ಯಾವುದೋ ಒಂದು ಹಂತದಲ್ಲಿ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಬಾಡಿಗೆ ಮನೆಯಲ್ಲಿ ವಾಸಿಸಿರುತ್ತೇವೆ. ಆ ವೇಳೆ ಗಮನಿಸಿರಬಹುದು, ನಮ್ಮ ಬಾಡಿಗೆ ಒಪ್ಪಂದಗಳು (Rent Agreements) ಹೆಚ್ಚಾಗಿ 11 ತಿಂಗಳಿಗೇ ಇರುತ್ತವೆ. ಇದು ಕೇವಲ ಕಾಕತಾಳೀಯವಲ್ಲ, ಇದರ ಹಿಂದೆ ಬಲವಾದ ಕಾನೂನು ಮತ್ತು ಆರ್ಥಿಕ ಕಾರಣಗಳಿವೆ.ಬಾಡಿಗೆ ಒಪ್ಪಂದದ ಅಸಲಿ ಸೀಕ್ರೆಟ್ ಹಾಗೂ ಕಾನೂನು ಮಾನ್ಯತೆಯ ಬಗ್ಗೆ ನೀವೊಮ್ಮೆ ತಿಳಿಯಲೇಬೇಕು.
ಏನಿದು ಬಾಡಿಗೆ ಒಪ್ಪಂದ? ಇದರ ಅವಶ್ಯಕತೆ ಏನು?
ಬಾಡಿಗೆ ಒಪ್ಪಂದವು ಮನೆ ಮಾಲೀಕ ಮತ್ತು ಬಾಡಿಗೆದಾರರ ಹಿತಾಸಕ್ತಿಯನ್ನು ಕಾಪಾಡುವ ಕಾನೂನುಬದ್ಧ ದಾಖಲೆ. ಇದರಲ್ಲಿ ಮನೆಯ ವಿವರ, ಬಾಡಿಗೆ ಮೊತ್ತ, ಅಡ್ವಾನ್ಸ್ (Security Deposit) ಮತ್ತು ನಿಯಮಗಳನ್ನು ಬರೆಯಲಾಗಿರುತ್ತದೆ. ಭವಿಷ್ಯದಲ್ಲಿ ಮಾಲೀಕ-ಬಾಡಿಗೆದಾರರ ನಡುವೆ ವಿವಾದ ಉಂಟಾದರೆ ಇದು ‘ಬ್ರಹ್ಮಾಸ್ತ್ರ’ದಂತೆ ಕೆಲಸ ಮಾಡುತ್ತದೆ.
11 ತಿಂಗಳ ಅವಧಿಯೇ ಏಕೆ ಪ್ರಸಿದ್ಧ?
1.ನೋಂದಣಿ ಕಾಯ್ದೆಯಿಂದ ವಿನಾಯಿತಿ (Avoiding Registration):
ಭಾರತೀಯ ನೋಂದಣಿ ಕಾಯ್ದೆ 1908ರ ಸೆಕ್ಷನ್ 17ರ ಪ್ರಕಾರ, 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಒಪ್ಪಂದಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಆದರೆ 11 ತಿಂಗಳ ಒಪ್ಪಂದಕ್ಕೆ ಈ ನಿಯಮ ಅನ್ವಯಿಸುವುದಿಲ್ಲ. ಇದರಿಂದ ಸಮಯ ಮತ್ತು ಅಲೆದಾಟ ಉಳಿಯುತ್ತದೆ.
2.ಹಣಕಾಸಿನ ಉಳಿತಾಯ (Cost-Effective):
12 ತಿಂಗಳ ಲೀಸ್ ಅಗ್ರಿಮೆಂಟ್ ಮಾಡಿದರೆ ವಾರ್ಷಿಕ ಬಾಡಿಗೆಗೆ ಅನುಗುಣವಾಗಿ ಹೆಚ್ಚಿನ ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ ಪಾವತಿಸಬೇಕಾಗುತ್ತದೆ. 11 ತಿಂಗಳ ಒಪ್ಪಂದದಲ್ಲಿ ಕೇವಲ ₹20 ರಿಂದ ₹100 ಮೌಲ್ಯದ ಸ್ಟಾಂಪ್ ಪೇಪರ್ ಬಳಸಬಹುದು.
3.ಬಾಡಿಗೆ ನಿಯಂತ್ರಣ ಕಾಯ್ದೆ (Rent Control Act):
ಅನೇಕ ರಾಜ್ಯಗಳಲ್ಲಿ 12 ತಿಂಗಳಿಗಿಂತ ಹೆಚ್ಚು ಅವಧಿಯ ಒಪ್ಪಂದಗಳ ಮೇಲೆ ಬಾಡಿಗೆ ನಿಯಂತ್ರಣ ಕಾಯ್ದೆ ಅನ್ವಯವಾಗುತ್ತದೆ. ಇದು ಮಾಲೀಕರಿಗೆ ಬಾಡಿಗೆ ಹೆಚ್ಚಿಸಲು ಅಥವಾ ಬಾಡಿಗೆದಾರರನ್ನು ಖಾಲಿ ಮಾಡಿಸಲು ತೊಂದರೆ ನೀಡಬಹುದು. 11 ತಿಂಗಳ ಒಪ್ಪಂದವು ಮಾಲೀಕರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತದೆ.
11 ತಿಂಗಳಿಗಿಂತ ಹೆಚ್ಚು ಕಾಲ ಬಾಡಿಗೆ ಒಪ್ಪಂದ ಮಾಡಿಕೊಂಡರೆ ಅದನ್ನು ನೋಂದಣಿ ಮಾಡಿಸುವುದು ಕಡ್ಡಾಯ. ಆದರೆ ಈ ನೋಂದಣಿಗೆ ಎಷ್ಟು ಖರ್ಚಾಗುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಒಂದು ಸಣ್ಣ ಲೆಕ್ಕಾಚಾರದ ಮೂಲಕ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳೋಣ.
ಉದಾಹರಣೆಗೆ: ನೀವು ಒಂದು ಮನೆಯನ್ನು 24 ತಿಂಗಳ (2 ವರ್ಷ) ಅವಧಿಗೆ ಬಾಡಿಗೆಗೆ ನೀಡಿದ್ದೀರಿ ಎಂದು ಭಾವಿಸೋಣ.
ಮೊದಲ 12 ತಿಂಗಳು: ತಿಂಗಳಿಗೆ ₹20,000 ಬಾಡಿಗೆ.
ನಂತರದ 12 ತಿಂಗಳು: ತಿಂಗಳಿಗೆ ₹22,000 ಬಾಡಿಗೆ (ಬಾಡಿಗೆ ಏರಿಕೆಯಾದ ನಂತರ).
ಈಗ ಈ ಒಪ್ಪಂದವನ್ನು ನೋಂದಾಯಿಸಲು ನೀವು ಪಾವತಿಸಬೇಕಾದ ಶುಲ್ಕ ಎಷ್ಟು ಗೊತ್ತಾ?
ಲೆಕ್ಕಾಚಾರ ಹೀಗಿದೆ:
ಮೊದಲು 24 ತಿಂಗಳ ಸರಾಸರಿ ಬಾಡಿಗೆಯನ್ನು ಲೆಕ್ಕ ಹಾಕಲಾಗುತ್ತದೆ. ಇಲ್ಲಿ ಸರಾಸರಿ ಮಾಸಿಕ ಬಾಡಿಗೆ ₹21,000 ಆಗುತ್ತದೆ.
ಈ ಸರಾಸರಿ ಮೊತ್ತದ ಮೇಲೆ ಮುದ್ರಾಂಕ ಶುಲ್ಕ (Stamp Duty) ಮತ್ತು ನೋಂದಣಿ ಶುಲ್ಕವನ್ನು ವಿಧಿಸಲಾಗುತ್ತದೆ.
ಈ ಉದಾಹರಣೆಯ ಪ್ರಕಾರ, ನೀವು ಅಂದಾಜು ₹5,040 ರಷ್ಟು ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.
4.ಸುಲಭ ನವೀಕರಣ (Easy Renewal):
11 ತಿಂಗಳ ನಂತರ ಇಬ್ಬರೂ ಚರ್ಚಿಸಿ, ಹೊಸ ನಿಯಮಗಳೊಂದಿಗೆ ಅಥವಾ ಬಾಡಿಗೆ ಏರಿಕೆಯೊಂದಿಗೆ ಒಪ್ಪಂದವನ್ನು ಸರಳವಾಗಿ ನವೀಕರಿಸಬಹುದು.
11 ತಿಂಗಳ ಒಪ್ಪಂದ ಕೋರ್ಟ್‌ನಲ್ಲಿ ಮಾನ್ಯವೇ?
ಖಂಡಿತವಾಗಿಯೂ! 11 ತಿಂಗಳ ಬಾಡಿಗೆ ಒಪ್ಪಂದವು ಕಾನೂನುಬದ್ಧವಾಗಿ 100% ಮಾನ್ಯತೆ ಹೊಂದಿದೆ. ಯಾವುದೇ ಕಾನೂನು ವಿವಾದ ಉಂಟಾದಾಗ ಇದನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸಲ್ಲಿಸಬಹುದು. ಆದರೆ ನೆನಪಿಡಿ, ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಒಪ್ಪಂದವನ್ನು ನೋಂದಣಿ ಮಾಡಿಸದಿದ್ದರೆ, ಅದನ್ನು ಕೋರ್ಟ್‌ನಲ್ಲಿ ಸಾಕ್ಷಿಯಾಗಿ ಪರಿಗಣಿಸುವುದಿಲ್ಲ.
ಒಪ್ಪಂದ ಇಲ್ಲದಿದ್ದರೆ ಏನಾಗುತ್ತೆ?
ಕಾನೂನು ರಕ್ಷಣೆ ಇರಲ್ಲ: ವಿವಾದ ಉಂಟಾದಾಗ ದಾಖಲೆ ಇಲ್ಲದೆ ನ್ಯಾಯ ಪಡೆಯುವುದು ಕಷ್ಟ.
ದಿಢೀರ್ ಬಾಡಿಗೆ ಏರಿಕೆ: ಒಪ್ಪಂದವಿಲ್ಲದಿದ್ದರೆ ಮಾಲೀಕರು ಯಾವಾಗ ಬೇಕಾದರೂ ಬಾಡಿಗೆ ಹೆಚ್ಚಿಸಬಹುದು.
ಅಡ್ವಾನ್ಸ್ ಹಣದ ಸಮಸ್ಯೆ: ಮನೆ ಖಾಲಿ ಮಾಡುವಾಗ ಸೆಕ್ಯೂರಿಟಿ ಡೆಪಾಸಿಟ್ ವಾಪಸ್ ಪಡೆಯಲು ತೊಂದರೆಯಾಗಬಹುದು.

