ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲು ಸರ್ವರ್ ಸಮಸ್ಯೆ ಎದುರಾಗಿದೆ. ಹೀಗಾಗಿ ಇದುವರೆಗೆ ಶೇಕಡ 25ರಷ್ಟು ರೇಷನ್ ಮಾತ್ರ ವಿತರಿಸಲಾಗಿದ್ದು, ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಪತ್ರ ಬರೆದು ಮನವಿ ಮಾಡಿದೆ.
ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್, 10.80 ಲಕ್ಷ ಅಂತ್ಯೋದಯ ಕಾರ್ಡ್ ಗಳಿಂದ ಒಟ್ಟು 4.11 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು 4.34 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥವನ್ನು ಪಡಿತರ ಚೀಟಿದಾರರಿಗೆ ವಿತರಿಸಬೇಕಿದೆ. ಆಯಾ ತಿಂಗಳಿನ 5ನೇ ತಾರೀಖಿನಿಂದ ಕಾರ್ಡ್ ದಾರರಿಗೆ ಪಡಿತರ ಹಂಚಿಕೆ ಆರಂಭ ಮಾಡಲಾಗುತ್ತಿದೆ. ಈ ವೇಳೆ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಕಾರ್ಡ್ ದಾರರ ಬೆರಳಚ್ಚು ಪಡೆದುಕೊಳ್ಳಲು ಸರ್ವರ್ ಸಮಸ್ಯೆ ಎದುರಾಗುತ್ತಿದೆ ಎಂದು ಪಡಿತರ ವಿತರಕರ ಸಂಘದ ರಾಜ್ಯ ಅಧ್ಯಕ್ಷ ಟಿ. ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಸಿಲನ್ನು ಲೆಕ್ಕಿಸದೆ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಕಾರ್ಡ್ ದಾರರು ಸರತಿ ಸಾಲಿನಲ್ಲಿ ನಿಂತುಕೊಳ್ಳುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದ ಪಡಿತರ ಪಡೆದುಕೊಳ್ಳದೆ ವಾಪಸ್ ಹೋಗುತ್ತಿದ್ದಾರೆ. ಮುಂದಿನ ಐದು ದಿನಗಳಲ್ಲಿ ಶೇಕಡ 75 ರಷ್ಟು ಪಡಿತರ ವಿತರಿಸಬೇಕಿದೆ. ಆಹಾರ ಇಲಾಖೆಯ ಕಾರ್ಯದರ್ಶಿ, ಆಯುಕ್ತರನ್ನು ಚುನಾವಣೆ ಕಾರ್ಯಕ್ಕೆ, ಜಂಟಿ ನಿರ್ದೇಶಕರು, ಉಪನಿರ್ದೇಶಕರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸರ್ವರ್ ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

