
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನೀಡುವ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಪರಿಷ್ಕರಿಸಲಾಗಿದೆ.
ಮೊದಲ ಹಂತದಲ್ಲಿ ಒಳರೋಗಿ ವಿಭಾಗಕ್ಕೆ ಮಾತ್ರ ಸೇವಾ ಸೌಲಭ್ಯ ಒದಗಿಸಲಾಗುವುದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ. ಹೊರರೋಗಿ ಚಿಕಿತ್ಸೆ ವಿಧಾನ, ಆಯುಷ್ ಚಿಕಿತ್ಸಾ ವಿಧಾನಗಳನ್ನು ಯೋಜನೆಯ ಮುಂದಿನ ಹಂತದಲ್ಲಿ ಪರಿಗಣಿಸಲಾಗುತ್ತದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಚಿಕಿತ್ಸಾ ವಿಧಾನಗಳಲ್ಲಿ ಒಳಗೊಂಡ ಡೇ ಕೇರ್ ಚಿಕಿತ್ಸಾ ವಿಧಾನಗಳನ್ನು ಹೊರತುಪಡಿಸಿ ಉಳಿದ ಡೇ ಕೇರ್ ಚಿಕಿತ್ಸೆಗಳನ್ನು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.
ಪೂರ್ಣ ಪ್ರಮಾಣದಲ್ಲಿ ಯೋಜನೆ ಜಾರಿಯಾದ ನಂತರ ಹೊರರೋಗಿ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರ, ವೈದ್ಯಕೀಯ ತಪಾಸಣೆ, ವಾರ್ಷಿಕ ಆರೋಗ್ಯ ತಪಾಸಣೆ ಮೊದಲಾದ ಆರೋಗ್ಯ ಸೇವಾ ಸೌಲಭ್ಯ ಕಲ್ಪಿಸಲಾಗುವುದು.
ಆರೋಗ್ಯ ಸಂಜೀವಿನಿ ಯೋಜನೆ ವ್ಯಾಪ್ತಿಯಲ್ಲಿ 2000 ಚಿಕಿತ್ಸಾ ವಿಧಾನ ಒಳಗೊಂಡಿದ್ದು, ಮಾಸ್ಟರ್ ಪ್ಯಾಕೇಜ್ ದರವನ್ನು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲು ಕ್ರಮ ವಹಿಸಲಾಗುವುದು ಎಂದು ಹೇಳಲಾಗಿದೆ.