ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಬಿಜೆಪಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದರು. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗಾಗಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ರಾಜ್ ಠಾಕ್ರೆ ಒಂದಾಗಿದ್ದು, ಬಿಜೆಪಿ ಇಬ್ಬರಿಗೂ ಎದುರಾಳಿಗಳು.
ರಾಜ್ ಠಾಕ್ರೆ, “ಮುಂಬೈ ಅನ್ನು ಕಾಪಾಡಲು ಎಚ್ಚರವಹಿಸಿ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತಯಂತ್ರಗಳನ್ನು ಅವರು ವಶಕ್ಕೆ ಪಡೆದುಕೊಳ್ಳಬಹುದು” ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರಿಗೆ ಕರೆ ನೀಡಿದರು.
“ನರೇಂದ್ರ ಮೋದಿ ಮುಖವನ್ನು ಮಂದಿಟ್ಟುಕೊಂಡು ಮತ್ತು ಇವಿಎಂ ಅನ್ನು ಹಿಡಿದುಕೊಂಡು ಎಲ್ಲವನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಅಧಿಕಾರ ಕಸಿದುಕೊಳ್ಳಲು ಅವರು ಇದನ್ನು ಮಾಡುತ್ತಾರೆ” ಎಂದು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.
“ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ, ಮುಂಬೈಯನ್ನು ರಕ್ಷಿಸುವ ದೊಡ್ಡ ಸವಾಲಿನತ್ತ ಗಮನಹರಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ” ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿಯ ಹೆಸರು ಉಲ್ಲೇಖ ಮಾಡದೇ ಎದುರಾಳಿಗಳು ಎಂದು ಹೇಳಿದ ರಾಜ್ ಠಾಕ್ರೆ, “ತಮ್ಮ ಪಕ್ಷದ ಪ್ರಚಾರವು ಮುಂಬೈ ಉಳಿಸಿ ಮತ್ತು ಇತರರು ನಗರದ ಮೇಲೆ ಹಿಡಿತ ಸಾಧಿಸುವುದನ್ನು ತಡೆಯುವುದರ ಮೇಲೆ ಕೇಂದ್ರೀಕೃತವಾಗಿರುತ್ತದೆ” ಎಂದರು.
“ಅವರಿಗೆ ಮುಂಬೈ ಮೇಲೆ ಹಿಡಿತ ಬೇಕಿದೆ. ನಾವು ಅವರ ಕನಸನ್ನು ನುಚ್ಚುನೂರು ಮಾಡಬೇಕು. ಜೊತೆಗೆ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ವೈಯಕ್ತಿಕ ಅಹಂಕಾರಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಬೇಕು. ಹಲವು ವರ್ಷಗಳಿಂದ ಅಧಿಕಾರದಲ್ಲಿ ಇಲ್ಲದಿದ್ದರೂ, ಎಂಎನ್ಎಸ್ ನಗರದಲ್ಲಿ ತನ್ನ ಅಸ್ತಿತ್ವ ಮತ್ತು ಪ್ರಭಾವವನ್ನು ಉಳಿಸಿಕೊಂಡಿದೆ” ಎಂದು ರಾಜ್ ಠಾಕ್ರೆ ಹೇಳಿದರು.
ಬಿಜೆಪಿಯ ಹೆಸರನ್ನು ನೇರವಾಗಿ ಉಲ್ಲೇಖಿಸದೆ, “ತಮ್ಮ ವಿರೋಧಿಗಳು ಅಧಿಕಾರವನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ಮುಖ ಮತ್ತು ಇವಿಎಂ ಯಂತ್ರಗಳನ್ನು ಅವಲಂಬಿಸಿದ್ದಾರೆ. ಅವರ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಮುಖ ಮತ್ತು ಇವಿಎಂ ಇದೆ ಮತ್ತು ಅವುಗಳನ್ನು ಬಳಸಿಕೊಂಡು ಎಲ್ಲವನ್ನೂ ಕಬಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಈ ಜನರು ಸ್ವತಂತ್ರವಾಗಿ ಬಂದವರಲ್ಲ. ಅವರನ್ನು ಬೇರೆಯವರು ಅಲ್ಲಿ ಕೂರಿಸಿದ್ದಾರೆ” ಎಂದು ಟೀಕಿಸಿದರು.
“ಅಲ್ಪಾವಧಿಯ ಲಾಭಕ್ಕಾಗಿ ಪಕ್ಷಾಂತರ ಮಾಡಬೇಡಿ. ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಿಂತ ಮಹಾರಾಷ್ಟ್ರ ಮತ್ತು ಮುಂಬೈ ದೊಡ್ಡದು. ಮುಂಬರುವ ಸಮಾವೇಶಗಳಲ್ಲಿ ನಾನು ಹಲವಾರು ರಾಜಕೀಯ ವಿಷಯಗಳ ಕುರಿತು ಮಾತನಾಡಲಿದ್ದು, ನಾಮಪತ್ರಗಳನ್ನು ಸಲ್ಲಿಸಿ ಆಕ್ರಮಣಕಾರಿ ಪ್ರಚಾರಕ್ಕೆ ಸಿದ್ಧರಾಗುವಂತೆ” ಕಾರ್ಯಕರ್ತರಿಗೆ ಕರೆ ಕೊಟ್ಟರು.
ಶಿವಸೇನೆ (ಯುಬಿಟಿ) ಜೊತೆ ನಡೆಯುತ್ತಿರುವ ಸೀಟು ಹಂಚಿಕೆ ಮಾತುಕತೆಗಳ ಬಗ್ಗೆ ಪ್ರಸ್ತಾಪಿಸಿ, “ಸೀಟುಗಳ ಹಂಚಿಕೆಯಿಂದ ಕಾರ್ಯಕರ್ತರು ಎದೆಗುಂದಬಾರದು. ನಮ್ಮ ಗಮನವು ಸಂಖ್ಯೆಗಳ ಆಟದ ಮೇಲೆ ಇರುವ ಬದಲು, ಮುಂಬೈಯನ್ನು ರಕ್ಷಿಸುವುದರ ಮೇಲೆ ಇರಬೇಕು” ಎಂದು ಕರೆ ಕೊಟ್ಟರು.
“ಚುನಾವಣಾ ಪ್ರಚಾರದ ಭಾಗವಾಗಿ ಎಂಎನ್ಎಸ್ ಮನೆ ಮನೆಗೆ ಭೇಟಿ ನೀಡಲಿದೆ. ಮುಂಬೈ ಉಳಿಸುವ ಗುರಿಯೊಂದಿಗೆ ಪಕ್ಷವು ಬಿಎಂಸಿ ಚುನಾವಣೆಯನ್ನು ಎದುರಿಸಲಿದೆ” ಎಂದು ಹೇಳಿದರು.

