ಮಂಡ್ಯ: 5 ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಯಾವ ಕ್ರಾಂತಿಯೂ ಆಗಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಹಾಗಾಗಿ ಸಿಎಂ ಬದಲಾವಣೆ, ಅಧಿಕಾರ ಹಂಚಿಕೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನವೆಂಬರ್ ನಲ್ಲಿ ಕ್ರಾಂತಿ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್, ಯಾವ ಕ್ರಾಂತಿಯೂ ಆಗಲ್ಲ. ಆರ್.ಅಶೋಕ್ ಹೇಳಿದ್ದು ಈವರೆಗೆ ಯಾವುದೂ ನಡೆದಿಲ್ಲ. ಸುಮ್ಮನೇ ಹೇಳಬೇಕೆಂದು ಹೇಳುತ್ತಿದ್ದಾರೆ ಎಂದರು.
2028ರಲ್ಲಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರಲು ಕರ್ನಾಟಕದಲ್ಲಿ ಇನ್ನೂ 15 ವರ್ಷ ಕಾಯಬೇಕು ಬರೆದಿಟ್ಟುಕೊಳ್ಳಿ. ಆರ್. ಅಶೋಕ್ ಅಶೋಕ್ ಹೇಳಿದ್ದು ಈವರೆಗೆ ಯಾವುದು ಆಗಿದೆ? ಕಳೆದ ಬಾರಿ ಅಶೋಕ್ ಈ ಬಾರಿ ಸಿದ್ದರಾಮಯ್ಯ ದಸರಾ ಉದ್ಘಾಟಿಸಲ್ಲ. ಹೊಸ ಮುಖ್ಯಮಂತ್ರಿ ಉದ್ಘಾಟಿಸುತ್ತಾರೆ ಎಂದು ಹೇಳಿದ್ದರು. ಹಾಗಾಯ್ತಾ? ಸಿದ್ದರಾಮಯ್ಯನವೇ ದಸರಾ ಮಾಡಿಲ್ಲವೇ? ಈಗ ನವೆಂಬರ್ ನಲ್ಲಿ ಕ್ರಾಂತ್ರಿ ಅಂತಿದ್ದಾರೆ ಯಾವ ಕ್ರಾಂತಿಯೂ ಆಗಲ್ಲ. ಸುಮ್ಮನೇ ಬಿಜೆಪಿ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಇದನ್ನು ಬಿಟ್ಟು ಮೊದಲು ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿಕೊಳ್ಳಲಿ. ಬಿಜೆಪಿಯವರದ್ದು ಮನೆಯೊಂದು ನೂರು ಬಾಗಿಲು ಆಗಿದೆ. ಅವರ ಪಕ್ಷದ ಹಿಡಿತವೇ ಅವರಿಗಿಲ್ಲ ನಮ್ಮ ಪಕ್ಷದ ಬಗ್ಗೆ ಅವರು ಗಮನ ಕೊಡುವುದು ಬೇಡ ಎಂದರು.
ಸರ್ಕಾರ, ಆಡಳಿತ ಚನ್ನಾಗಿ ನಡೆಯುತ್ತಿದೆ. ಯಾವ ಗೊಂದಲವೂ ಇಲ್ಲ. ಡಿ.ಕೆ. ಶಿವಕುಮಾರ್ ಕೂಡ ಸಿಎಂ ಆಗಬೇಕು. ಆದರೆ ಸಿಎಂ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಡಿಸಿಎಂ ಅವರೇ ಹೇಳಿದ್ದಾರೆ. ಹಾಗಾಗಿ ಯಾವುದೇ ಗೊಂದಲವಿಲ್ಲ ಎಂದರು.