ಕಲಬುರಗಿ: ಕಲಬುರಗಿ ಜಿಲ್ಲೆಯ ಮಳಖೇಡ ವ್ಯಾಪ್ತಿಯಲ್ಲಿ ಯುವತಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಣೆಯಾಗಿದ್ದ ಯುವತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಕೊಲೆ ಕೇಸ್ ನಲ್ಲಿ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಳಖೇಡ ಗ್ರಾಮದ ಸುಲಹಳ್ಲಿ ನಿವಾಸಿಯಾಗಿದ್ದ ಭಾಗ್ಯಶ್ರೀ ಸೆ.11ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ವಾರದ ಬಳಿಕ ಯುವತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಬ್ಬಿಣದ ರಾಡ್ ನಿಂದ ಯುವತಿಯ ತಲೆಗೆ ಹೊಡೆದು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಬಂಧಿತ ಮಂಜುನಾಥ್ ಸಹೋದರ ವಿನೋದ್ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ವಿನೋದ್ ಆತ್ಮಹತ್ಯೆಗೆ ಭಾಗ್ಯಶ್ರೀ ತಂದೆ ಕಾರಣ ಎಂದು ಮಂಜುನಾಥ್ ಆರೋಪಿಸಿದ್ದ. ಮಳಖೇಡ ಗ್ರಾಮದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯಲ್ಲಿ ವಿನೋದ್ ಕೆಲಸ ಮಾಡುತ್ತಿದ್ದ. ಕೆಲಸ ಖಾಯಂ ಗಾಗಿ ಯತ್ನಿಸುತ್ತಿದ್ದ. ಆದರೆ ಈತನಿಗೆ ಉದ್ಯೋಗ ಖಾಯಂ ಆಗದಂತೆ ಭಾಗ್ಯಶ್ರೀ ತಂದೆ ಚೆನ್ನವೀರಪ್ಪ ತಪ್ಪಿಸಿದ್ದ ಎನ್ನಲಾಗಿದೆ.
ಇದರಿಂದ ಮನನೊಂದ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಹೋದರನ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಮಂಜುನಾಥ್ ಆವಾಜ್ ಹಾಕಿದ್ದ. ಸೆ.11ರಂದು ಚೆನ್ನವೀರಪ್ಪ ಪುತ್ರಿ ವಾಕಿಂಗ್ ಗೆ ತೆರಳಿದ್ದ ವೇಳೆ ಮಂಜುನಾಥ್ ಅಲ್ಲಿಗೆ ಬಂದಿದ್ದ. ಭಾಗ್ಯಶ್ರೀ ತನ್ನ ಸ್ನೇಹಿತೆಯೊಂದಿಗೆ ವಾಕಿಂಗ್ ಮಾಡುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ವಾಕಿಂಗ್ ಹೋಗಿದ್ದ ಭಾಗ್ಯಶ್ರೀ ನಾಪತ್ತೆಯಾಗಿದ್ದಳು. ಭಾಗ್ಯಶ್ರೀಯನ್ನು ಕಿಡ್ನ್ಯಾಪ್ ಮಾಡಿ ಮಂಜುನಾಥ್ ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.