ಹುಬ್ಬಳ್ಳಿ: ಖ್ಯಾತ ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ತಮ್ಮದು ಲವ್ ಜಿಹಾದ್ ಅಲ್ಲ, ಮದುವೆ ಬಳಿಕ ನನ್ನ ತಾಯಿಯೇ ಸಪೋರ್ಟ್ ಮಾಡಿದ್ದಾರೆ ಎಂದು ಮುಕಳೆಪ್ಪ ಪತ್ನಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಮುಕಳೆಪ್ಪ ಪತ್ನಿ, ನಮ್ಮದು ಲವ್ ಜಿಹಾದ್ ಅಲ್ಲ, ನಾವಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ಮದುವೆ ಬಳಿಕ ನನ್ನ ಪೋಷಕರು ಸಪೋರ್ಟ್ ಮಾಡಿದ್ದಾರೆ. ನನ್ನ ತಾಯಿಯೇ ಬೆಂಬಲ ನೀಡಿದ್ದಾರೆ. ಆದರೆ ಈಗ ಯಾಕೆ ಅವರು ನಮ್ಮ ವಿರುದ್ಧ ದೂರು ನೀಡಿದ್ದಾರೆ ಗೊತ್ತಿಲ್ಲ. ನನ್ನ ತಾಯಿ ನಮಗೆ ಸಪೋರ್ಟ್ ಮಾಡಿರುವ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ಎಲ್ಲಾ ದಾಖಲೆಗಳನ್ನು ಹಂಚಿಕೊಳ್ಳುತ್ತೇನೆ. ನನ್ನ ತಾಯಿಗೆ ಯಾರೋ ಮೈಂಡ್ ವಾಶ್ ಮಾಡಿ ಈ ರೀತಿ ಹೇಳಿಸುತ್ತಿದ್ದಾರೆ. ನನ್ನ ತಾಯಿಯೇ ಮದುವೆ ಸಪೋರ್ಟ್ ಮಾಡಿದ್ದರು, ಬಳಿಕವೂ ಬೆಂಬಲ ನೀಡಿದ್ದರು. ಈಗ ಇದ್ದಕ್ಕಿದ್ದಂತೆ ಉಲ್ಟಾ ಹೊಡೆಯಲು ಬೇರೆ ಏನೋ ಕಾರಣವಿರಬಹುದು. ಯಾರೋ ಹೇಳಿಕೊಟ್ಟು ಮಾಡಿಸುತ್ತಿರಬಹುದು. ಇದರಿಂದ ನಮ್ಮ ಕುಟುಂಬಕ್ಕೆ ಏನಾದರೂ ಆದರೆ ಅವರೇ ಜವಾಬ್ದಾರಿ ಎಂದು ಮುಕೆಳೆಪ್ಪ ಪತ್ನಿ ಹೇಳಿಕೆ ನೀಡಿದ್ದಾರೆ.
ಯೂಟ್ಯೂಬರ್ ಮುಕಳೆಪ್ಪ ಸುಳ್ಳು ದಾಖಲೆಗಳನ್ನು ನೀಡಿ ಹಿಂದೂ ಯುವತಿಯನ್ನು ವಿವಾಹವಾಗಿದ್ದಾರೆ. ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂಪರ ಕಾರ್ಯಕರ್ತರು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಹಿಂದೂಕಾರ್ಯಕರ್ತರೊಂದಿಗೆ ಆಗಮಿಸಿ ಯುವತಿಯ ತಾಯಿ ಕೂಡ ದೂರು ದಾಖಲಿಸಿದ್ದರು, ಮುಕೆಳೆಪ್ಪ ರೀಲ್ಸ್ ಹೆಸರಲ್ಲಿ ತನ್ನ ಮಗಳನ್ನು ಕಿಡ್ನ್ಯಾಪ್ ಮಾಡಿ ಮದುವೆಯಾಗಿದ್ದಾನೆ. ಬಳಿಕ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮುಕಳೆಪ್ಪ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.