ಬೆಂಗಳೂರು: ಬೆಂಗಳೂರಿನಲ್ಲಿ ಯುವಕನನ್ನು ಕಿಡ್ನ್ಯಾಪ್ ಮಾಡಿ 2.5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದುಬೈನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರು ಮೂಲದ ಲಾರೆನ್ಸ್ ಎಂಬ ಯುವಕನನ್ನು ಗೆಳತಿಯೇ ಕಿಡ್ನ್ಯಾಪ್ ಮಾಡಿ ರೂಮಿನಲ್ಲಿ ಕೂಡಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕ ಲಾರೆನ್ಸ್ ನನ್ನು 8 ದಿನಗಳ ಕಾಲ ಕೂಡಿ ಹಾಕಿ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ದುಬೈ ನಲ್ಲಿ ಕೆಲಸ ಮಾಡುತ್ತಿದ್ದ ಲಾರೆನ್ಸ್, ಬೆಂಗಳೂರಿಗೆ ಬಂದಿದ್ದಾಗ ಜುಲೈ 15ರಂದು ಪ್ರತಿಷ್ಠತ ಹೋಟೆಲ್ ನಲ್ಲಿ ತಂಗಿದ್ದ. ಈ ವೇಳೆ ಸ್ನೇಹಿತೆ ಮಹಿಮಾ ಮಾತನಾಡಬೇಕು ಹೊರಗೆ ಬಾ ಎಂದು ಕರೆದಿದ್ದಳು. ಹೋಟೆಲ್ ನಿಂದ ಹೊರಗೆ ಬಂದ ಲಾರೆನ್ಸ್ ನನ್ನು ಮೂವರು ಕಿಡ್ನ್ಯಾಪ್ ಮಾಡಿದ್ದರು.
ಬಳಿಕ ಇಂದಿರಾನಗರದ ಸರ್ವಿಸ್ ಅಪಾರ್ಟ್ ಮೆಂಟ್ ವೊಂದರಲ್ಲಿ ಕೂಡಿ ಹಾಕಿದ್ದರು. ಮೊದಲು 50 ಲಕ್ಷ, ಬಳಿಕ 2.5 ಕೋಟಿ ಹಣ ನೀಡುವಂತೆ ಹಲ್ಲೆ ನಡೆಸಿದ್ದರು. ಲಾರೆನ್ಸ್ ತಾಯಿ ತನ್ನ ಮಗೆ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿರುವ ಬಗ್ಗೆ ವಿಚಾರ ತಿಳಿದ ಆರೋಪಿಗಳು 8 ದಿನಗಳ ಬಳಿಕ ಯುವಕನನ್ನು ಬಿಟ್ಟು ಕಳಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.