ಬೆಂಗಳೂರು: ಬರ್ತ್ ಡೇ ಪಾರ್ಟಿ ಬಿಲ್ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಪಾರಗದ್ದೆ ವಡರಪಾಳ್ಯದಲ್ಲಿ ನಡೆದಿದೆ.
ಸಂದೀಪ್ (23) ಕೊಲೆಯಾದ ಯುವಕ. ಸ್ನೇಹಿತರಿಂದಲೇ ಬರ್ತ್ ಡೆ ಬಾಯ್ ಸಂದೀಪ್ ಕೊಲೆಯಾಗಿದ್ದಾನೆ. ಸಂತೋಷ್ ಹಾಗೂ ಸಾಗರ್ ಗೆಳೆಯನನ್ನೇ ಕೊಂದ ಆರೋಪಿಗಳು. ಅಕ್ಟೋಬರ್ 16ರಂದು ಸಂದೀಪ್ ಹುಟ್ಟುಹಬ್ಬವಾಗಿತ್ತು. ಬರ್ತ್ ಡೇಗೆಂದು ಸಂತೋಷ್ ಹಾಗೂ ಸಾಗರ್ ಇಬ್ಬರನ್ನು ಬಾರ್ ಗೆ ಕರೆದೊಯ್ದು ಪಾರ್ಟಿ ಕೊಡಿಸಿದ್ದ. ಪಾರ್ಟಿ ಮುಗಿದ ಬಳಿಕ ಸಂದೀಪ್ ಮೊದಲ ಬಾರಿ ಬಿಲ್ ಪಾವತಿಸಿದ್ದ. ಎರಡನೇ ಸಲ ಬಿಲ್ ಕಟ್ಟುವಂತೆ ಸಂತೋಷ್ ಹಾಗೂ ಸಾಗರ್ ಒತ್ತಾಯಿಸಿದ್ದರು.
ತನ್ನ ಬಳಿ ಹಣವಿಲ್ಲ ಎಂದು ಸಂದೀಪ್ ಹೇಳಿದ್ದ. ಇದೇ ವಿಚಾರವಾಗಿ ಬಾರ್ ಬಳಿ ಗಲಾಟೆಯಾಗಿತ್ತು. ಬೇಸರಗೊಂಡ ಸಂದೀಪ್ ಊರಿಗೆ ವಾಪಸ್ ಆಗಿದ್ದ. ಅಷ್ಟಕ್ಕೇ ಸುಮ್ಮನಾಗದ ಸಂತೋಷ್ ಹಾಗೂ ಸಾಗರ್, ಸಂದೀಪ್ ನನ್ನು ವಾಲಿಬಾಲ್ ಕೋರ್ಟ್ ಬಳಿ ಕರೆಸಿ ಹಲ್ಲೆ ನಡೆಸಿದ್ದರು. ಹಲ್ಲೆ ವೇಳೆ ಸಂದೀಪ್ ತಲೆಗೆ ಗಂಭೀರವಾದ ಪೆಟ್ಟುಬಿದ್ದಿತ್ತು. ಘಟನೆ ನಡೆದು ಮೂರು ದಿನಗಳ ಬಳಿಕ ಸಂದೀಪ್ ಬ್ರೈನ್ ನಲ್ಲಿ ಬ್ಲಡ್ ಬ್ಲಾಕ್ ಆಗಿದೆ. ಸಂದೀಪ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಸಂದೀಪ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಯುವಕ ಸಾವಿಗೆ ಕಾರಣರಾದ ಸ್ನೇಹಿತ ಸಂತೋಷ್ ಹಾಗೂ ಸಾಗರ್ ಇಬ್ಬರನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.
