ವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿನ 40% ಕಮಿಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಸ್ ಐಟಿ ರಚಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಭ್ರಷ್ಟಾಚಾರದ ಬಗ್ಗೆ ಮೊದಲು ತನಿಖೆಯಾಗಲಿ. ಅದರಲ್ಲಿ ತಪ್ಪೇನಿದೆ ಎಂದರು.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬಿಜೆಪಿ ಅವಧಿಯಲ್ಲಿ 40% ಕಮಿಷನ್ ನಡೆದಿದೆ ಎಂದು ಕಾಂಗ್ರೆಸ್ ಮಾಡಿದ ಆರೋಪಗಳ ತನಿಖೆಗೆ ಸರ್ಕಾರ ಎಸ್ ಐಟಿ ರಚನೆ ಮಾಡಿರುವುದು ಸಾಧನೆಯಲ್ಲ. ಆಗ ಸಿಎಂ ಆಗಿದ್ದ ಬೊಮ್ಮಾಯಿ ಅವರೇ ಹೇಳಿದ್ದಾರೆ. ಎಸ್ ಐಟಿ ಅಷ್ಟೇ ಅಲ್ಲ, ಸಿಬಿಐ, ಎನ್ ಐಎ ತನಿಖೆಗಾದರೂ ಕೊಡಲಿ ಎಂದಿದಾರೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ. ತನಿಖೆ ನಡೆಯಲಿ, ಭ್ರಷ್ಟಾಚಾರ ಯಾರು ಮಾಡಿದ್ದಾರೆ ಗೊತ್ತಾಗುತ್ತದೆ. ಎಲ್ಲಿ ಹೊಂದಾಣಿಕೆಯಾಗಲ್ಲ ಅಲ್ಲಿ ಆರೋಪಗಳನ್ನು ಮಾಡುವ ಕೆಲಸವಷ್ಟೇ ಆಗಬಾರದು. ನಿಜವಾಗಿಯೂ ತನಿಖೆ ನಡೆಯಲಿ ಭ್ರಷ್ಟಾಚಾರ ಯಾರು ಮಾಡಿದ್ದಾರೆ? ಕೋವಿಡ್ ನಲ್ಲಿ ಹಣ ತಿಂದವರು ಯಾರು? ಹಣವನ್ನು ದುರುಪಯೋಗಪಡಿಸಿಕೊಂಡಿದ್ದು ಯಾರು? ಏನು ಎಂಬುದು ಗೊತ್ತಾಗಲಿ. ಜನರಿಗೆ ಸತ್ಯಾಸತ್ಯತೆ ತಿಳಿಯಲಿ ಎಂದು ಹೇಳಿದರು.